ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಎಲ್ಲ ಕಾಲಘಟ್ಟ, ಪೀಳಿಗೆಗೆ ಅನ್ವಯ. ಹಾಗಾಗಿ, ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ. ಈ ಮಹಾಕಾವ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳಾಗಿವೆ.

ದಾಬಸ್‍ಪೇಟೆ: ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿ ಇಡೀ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆ ಪರಿಚಯ ಮಾಡಿಕೊಟ್ಟ ಮಹಾನ್ ದಾರ್ಶನಿಕ ಎಂದು ಮುಖ್ಯಶಿಕ್ಷಕ ಆರ್.ಸಿದ್ದರಾಜಯ್ಯ ತಿಳಿಸಿದರು. ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಶಿವಗಂಗಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಎಲ್ಲ ಕಾಲಘಟ್ಟ, ಪೀಳಿಗೆಗೆ ಅನ್ವಯ. ಹಾಗಾಗಿ, ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ. ಈ ಮಹಾಕಾವ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳಾಗಿವೆ. ರಾಮಾಯಣದ ಪಾತ್ರಗಳು, ದೃಶ್ಯಗಳು ಇವತ್ತಿಗೂ ನಮ್ಮನ್ನು ಕಾಡುತ್ತವೆ ಎಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ್ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿ ತೋರಿಸಿಕೊಟ್ಟ ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಶ್ರೇಷ್ಠ ಮಹಾಕಾವ್ಯವನ್ನೇ ಬರೆದರು. ರಾಮಾಯಣದಲ್ಲಿ 24,253 ಶ್ಲೋಕಗಳಿದ್ದು ಏಳು ಕಾಂಡಗಳಿವೆ. ಈ ಕೃತಿಯು ಇಡೀ ಪ್ರಪಂಚಕ್ಕೆ ಅನ್ವಯವಾಗಿದೆ ಎಂದರು. ಶಾಲಾ ಕಾಲೇಜಿನ ಶಿಕ್ಷಕರು ಉಪಸ್ಥಿತರಿದ್ದರು.