ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಜಾಗರಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ಸಾಂಗೋಪಸಾಂಗವಾಗಿ ನಡೆದವು.

ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.

ಶ್ರೀಅರಕೇಶ್ವರ ಸ್ವಾಮಿಗೆ ವಿಶೇಷ ಪೂಜೆ:

ಮಂಡ್ಯದ ಅರ್ಕೇಶ್ವರನಗರದ ಶ್ರೀಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೪.೩೦ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಪತ್ರ ಅರ್ಚನೆ, ನಿನ್ನೆ ಮುಂಜಾನೆಯಿಂದ ಇಂದು ಮುಂಜಾನೆಯವರೆಗೆ ಐದು ಜಾವಗಳ ಪೂಜೆ ನಡೆಯಿತು. ಪ್ರತಿ ಪೂಜೆಯ ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು.


ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ನಡೆಯುತ್ತಿದ್ದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ, ಭಜನಾ ಕಾರ್ಯಕ್ರಮಗಳು ನಡೆದವು. ಬಳಿಕ ನಾಳೆ ಬೆಳಗ್ಗೆ ಭಕ್ತಾದಿಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ನಗರದ ಪ್ರಮುಖ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಸಕಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳ್ಳಿಯ ನಾಗಾಭರಣವನ್ನು ಧರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರ ನಗರದಲ್ಲಿರುವ ಶ್ರೀಮಲೈ ಮಹದೇಶ್ವರಸ್ವಾಮಿ, ಶಂಕರಮಠದ ಆದಿ ಚುಂಚನಗಿರಿ ಶಾಖಾ ಮಠದಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿಗೆ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನಡೆಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಶ್ರೀ ಶನೇಶ್ವರ ದೇವಸ್ಥಾನ:

ನಗರದ ಚಾಮುಂಡೇಶ್ವರಿನಗರದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿAದಲೇ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂರ‍್ಯಗಳನ್ನು ನಡೆಸಲಾಯಿತು. ನಂತರ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ಮುಂಭಾಗದಲ್ಲಿರುವ ಮಂಡ್ಯ-ಬನ್ನೂರು ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇಂದು ರಾತ್ರಿ ಪೂರ್ತಾ ವಿಶೇಷ ಪೂಜಾ ಕರ‍್ಯಕ್ರಮಗಳು ನಡೆಯಲಿವೆಯ ನಾಳೆ ಬೆಳಗ್ಗೆಯಿಂದ ಸಂಜೆಯವರೆವಿಗೂ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.