ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟಕ್ಕೆ ಎಲ್ಲೆಡೆಯಿಂದ ಶಿವ ಜಾಗರಣೆ ಹರಿದು ಬಂದ ಭಕ್ತ ಸಾಗರ, ಮಾದಪ್ಪನಿಗೆ ಬಂಗಾರದ ಕಿರೀಟಧಾರಣೆ, ವಿಶೇಷ ಉತ್ಸವ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು .
ಬಂಗಾರದ ಕಿರೀಟ ಧಾರಣೆ:ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾದೇಶ್ವರನಿಗೆ ಉತ್ಸಾಹಗಳ ಸಂಭ್ರಮದ ನಡುವೆ ಯಮ ಪೂಜೆಯ ನಂತರ ಸ್ವಾಮಿಗೆ ಬಂಗಾರದ ಕಿರೀಟಧಾರಣೆ, ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಮಾದಪ್ಪ ಇದನ್ನು ಭಕ್ತರು ಕಣ್ತುಂಬಿಕೊಂಡು ಉಫೇ ಉಘೇ ಎಂದು ಜೈಕಾರಗಳನ್ನು ಕೂಗಿ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ:
ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಎಸ್. ನಾರಾಯಣ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದರ್ ಉಪಸ್ಥಿತರಿದ್ದರು.
ಜಾಗರಣೆ ಶಿವಗಣರಾಧನೆ:ಮಲೆ ಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳ ನೆರದಿದ್ದ ಕಾರ್ಯಕ್ರಮದಲ್ಲಿ ಮಾದಪ್ಪನ ಭಕ್ತಿಗೀತೆ ಭಾವಗೀತೆಗಳು ಹಾಗೂ ಕಥಾ ಪ್ರಸಂಗ ಕಾರ್ಯಕ್ರಮಗಳು ಸಹ ಸಂಭ್ರಮ ಸಡಗರದೊಂದಿಗೆ ಜರುಗಿತು. ಇದೇ ವೇಳೆಯಲ್ಲಿ ಅಪಾರ ಸಂಖ್ಯೆಯ ಭಕ್ತಗಣ ಜಾಗರಣೆ ಮಾಡುವ ಮೂಲಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವ ಜಾಗರಣೆ ಭಜನೆ ಸಾಂಪ್ರದಾಯದಂತೆ ನಡೆಯಿತು.
ಮಾದಪ್ಪನ ದರ್ಶನ ಪಡೆದ ಗಣ್ಯರು:ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಡೆದ ವಿಶೇಷ ಪೂಜೆಗೆ ಶಾಸಕ ಎಂ.ಆರ್.ಮಂಜುನಾಥ್, ಚಲನಚಿತ್ರ ನಟ ನಿರ್ದೇಶಕ ಎಸ್. ನಾರಾಯಣ್ ಮತ್ತು ಜಿಲ್ಲಾಧಿಕಾರಿ ಶ್ರೀ ರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್, ಇನ್ಸ್ಪೆಕ್ಟರ್ ಜಗದೀಶ್, ಹನೂರು ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.
ಕುಣಿದು ಕುಪ್ಪಳಿಸಿದ ಭಕ್ತ ಸಮೂಹ:ಮಲೆ ಮಾದೇಶ್ವರ ಬೆಟ್ಟದಲ್ಲಿ ಐದು ದಿನಗಳ ಮಹಾಶಿವರಾತ್ರಿ ಹಬ್ಬದ ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಅಲ್ಲಲ್ಲಿ ಬಿಡಾರಗಳಲ್ಲಿ ರಂಗಮಂದಿರ ಸೇರಿದಂತೆ ದೇವಾಲಯ ಗೋಪುರ ರಾಜಗೋಪುರ ಸುತ್ತಲಿನ ಪ್ರದೇಶದಲ್ಲಿ ಅಪಾರ ಭಕ್ತಗಣ ನೆರೆದಿದ್ದು ಅಲ್ಲಲ್ಲಿ ಮಹಾಶಿವರಾತ್ರಿಯ ಸಂಭ್ರಮ ಜಾಗರಣೆಯ ನಡುವೆ ಮಾದಪ್ಪನ ಭಕ್ತರು ಕುಣಿದು ಕುಪ್ಪಳಿಸಿದರು.
ವೈಭವದಿಂದ ನಡೆದ ಚಿನ್ನದ ರಥೋತ್ಸವ:ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಮುಂಭಾಗ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳಿಂದ ಚಿನ್ನದ ರಥೋತ್ಸವ ವೇಳೆಯಲ್ಲಿ ಭಕ್ತರು ಸತ್ತಿಗೆಗಳನ್ನು ಹಿಡಿದು ಪ್ರದಕ್ಷಿಣ ಹಾಕುವ ವೇಳೆ ಮಾದಪ್ಪನ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಶೇಷ ದಾಸೋಹ ವ್ಯವಸ್ಥೆ:ಮಹಾಶಿವರಾತ್ರಿ ಹಬ್ಬದ ಜಾತ್ರೆ ಹಿನ್ನೆಲೆಯಲ್ಲಿ ನೆರದಿದ್ದ ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ಹೆಚ್ಚುವರಿಯಾಗಿ ಸಹ ವಿವಿಧಡೆ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಾಲೂರು ಬೃಹನ್ ಮಠದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿವಲಿಂಗ ವಿಶೇಷ ಪೂಜೆ ಧಾರ್ಮಿಕವಾಗಿ ಸಲ್ಲಿಸಿದರು.
ಬಿಗಿ ಪೊಲೀಸ್ ಪಹರೆ:ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಲಕ್ಷಾಂತರ ಭಕ್ತರ ಭದ್ರತೆಗಾಗಿ ಶ್ರೀ ಕ್ಷೇತ್ರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರ ಆದೇಶದ ಅನ್ವಯ ಶ್ರೀ ಕ್ಷೇತ್ರದ ದೇವಾಲಯ ಸೇರಿದಂತೆ ಬಸ್ ನಿಲ್ದಾಣ ಸಾಲೂರು ಮಠಕ್ಕೆ ತೆರಳುವ ರಸ್ತೆಯಲ್ಲಿ ಮತ್ತು ವಿವಿಧಡೆ ಹೆಚ್ಚಿನ ಪೊಲೀಸ್ ಅಧಿಕಾರಿ ಸಿಬ್ಬಂದಿ ವರ್ಗದವರು ನೇಮಕ ಮಾಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ಪೊಲೀಸ್ ಇಲಾಖೆ ವಹಿಸಿತ್ತು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆ ಮಾದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ವಿಶೇಷ ಉತ್ಸವ ಪೂಜಾ ಕಾರ್ಯಕ್ರಮ ನಡೆಯುತ್ತಿದೆ. ಭಕ್ತಾದಿಗಳ ಸಕಲ ಸೌಲಭ್ಯ ನೀಡುವ ನಿಟ್ಟಿನಲ್ಲಿ ವಿಶೇಷ ದಾಸೋಹ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದೆ .-ಎ.ಇ. ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ