ಸಾರಾಂಶ
ದೊಡ್ಡಬಳ್ಳಾಪುರ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕು ಮತ್ತು ನಗರದ ಹಲವು ಶಿವಾಲಯಗಳಲ್ಲಿ ವಿಶೇಷಾಲಂಕಾರ ಪೂಜೆ, ಶಿವಾರಾಧನೆ, ಜಾಗರಣೆ ಅಂಗವಾಗಿ ಭಜನೆ, ಸಂಗೀತ ಕಚೇರಿ, ಪೌರಾಣಿಕ ನಾಟಕ ಪ್ರದರ್ಶನಗಳು ಶುಕ್ರವಾರ ನಡೆಯಿತು.
ನಗರೇಶ್ವರನಿಗೆ ವಿಶೇಷ ಅಲಂಕಾರ:ನಗರದ ಶ್ರೀನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾಲಂಕಾರಗಳು ನಡೆಯಿತು. ಚೌಕದ ಸರ್ಕಲ್‌ನಿಂದ ಹಳೇ ಪೊಲೀಸ್ ಸ್ಟೇಷನ್ ಸಮೀಪದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಬಾಲಶಿವನ ವಿವಿಧ ಭಾವಭಂಗಿಯ ಆಕರ್ಷಕ ಬೃಹತ್ ಚಿತ್ರಪಟಗಳನ್ನು ಪ್ರತಿಷ್ಠಾಪಿಸಿ ಅಲಂಕರಿಸಲಾಗಿತ್ತು. ಬೃಹತ್ ಅಲಂಕೃತ ಆನೆಗಳು, ಸಿಂಹ ಹಾಗೂ ಗಣಪತಿಯ ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ಗಣಪತಿ ಮೂರ್ತಿಗಳನ್ನು ಅಲಂಕರಿಸಲಾಗಿತ್ತು.
ಸಹಸ್ರಾರು ದ್ರಾಕ್ಷಿಗೊಂಚಲು:ದೇಗುಲದ ಮುಂಭಾಗವನ್ನು ಗುಲಾಬಿ ಹೂಗಳಿಂದ ಅಲಂಕರಿಸಲಾಗಿತ್ತು. ಮುಂಭಾಗದಲ್ಲಿ 25 ಅಡಿ ಎತ್ತರದ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ಮೂಲ ವಿಗ್ರಹವಾದ ನಗರೇಶ್ವರ ಸ್ವಾಮಿ, ಪಾರ್ವತಾ ದೇವಿಗೆ, ಮಹಾಗಣಪತಿ ವಿಗ್ರಹಗಳಿಗೂ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ದೇಗುಲ ಆವರಣದಲ್ಲಿ ಭಕ್ತಾದಿಗಳು ಅಕ್ಕಿ ಆರತಿಗಳನ್ನು ಬೆಳಗಿ ಸಂಭ್ರಮಿಸಿದರು.
ಸ್ವಯಂಭೇಶ್ವರ ದೇಗುಲ:ಇತಿಹಾಸ ಪ್ರಸಿದ್ಧ ಶ್ರೀಸ್ವಯಂಭೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. 10 ಶತಮಾನಗಳಷ್ಟು ಹಳೆಯದಾದ ದೇಗುಲದಲ್ಲಿರುವ ಉದ್ಭವ ಲಿಂಗಕ್ಕೆ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಉದ್ಭವ ಲಿಂಗದ ದರ್ಶನ ಪಡೆದರು.
ಹುಲುಕುಡಿಯಲ್ಲಿ ವಿಶೇಷ:ತಾಲೂಕಿನ ಹುಲುಕುಡಿ ಬೆಟ್ಟದಲ್ಲಿನ ವೀರಭದ್ರೇಶ್ವರ-ಭದ್ರಕಾಳಮ್ಮ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಗುಹಾ ದೇವಾಲಯದಲ್ಲಿರುವ ಶ್ರೀಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಹುಲುಕುಡಿ ಬೆಟ್ಟದ ತಪ್ಪಲಿನ ಗ್ರಾಮಗಳಾದ ಮಾಡೇಶ್ವರ, ಬೈರಾಪುರ, ತಾಲೂಕಿನ ಮಾಕಳಿ ಬೆಟ್ಟ, ರಾಜಘಟ್ಟ, ತೂಬಗೆರೆ, ಶ್ರವಣೂರು, ಅಂಬಲಗೆರೆ, ಯಲಾದಹಳ್ಳಿ, ದರ್ಗಾಜೋಗಹಳ್ಳಿ, ಕೊಂಡಸಂದ್ರದ ಕಾಶಿ ವಿಶ್ವನಾಥದೇವಾಲಯದ ಶಿವಲಿಂಗ ಮೂರ್ತಿಗಳಿಗೂ ವಿಶೇಷಾಲಂಕಾರ ಮಾಡಲಾಗಿತ್ತು.ತೋಪನಯ್ಯ ಸನ್ನಿಧಿಯಲ್ಲಿ ಶಿವರಾತ್ರಿ:
ದೊಡ್ಡಬೆಳವಂಗಲ ಸಮೀಪದ ತೋಪನಯ್ಯಸ್ವಾಮಿ (ಶಿವ) ದೇವಸ್ಥಾನದಲ್ಲಿ ಶಿವರಾತ್ರಿ ವೈಭವ ಕಂಡು ಬಂತು. ಭಕ್ತರ ಹರಕೆಗಳು ಈಡೇರಿದಾಗ ತೋಪನಯ್ಯಸ್ವಾಮಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಬಳಿಯೇ ನಾಲ್ಕಾರು ಜನರಿಗೆ ಹೋಳಿಗೆ ಊಟ ಹಾಕಿಸುವುದು ಇಲ್ಲಿನ ಸಂಪ್ರದಾಯ. ಬಿಲ್ವಪತ್ರೆ ಮರದ ಕೆಳಗಿರುವ ದೇವಾಲಯದಲ್ಲಿ ಶಿವರಾತ್ರಿಗೆ ವಿಶೇಷ ಪೂಜೆ ನಡೆಯಿತು.ವಿವಿಧ ದೇವಾಲಯಗಳಲ್ಲಿ ಸಂಭ್ರಮ:
ಇತಿಹಾಸ ಪ್ರಸಿದ್ದ ಶ್ರೀ ಲಕ್ಷೀ ವೆಂಕಟರಮಣ ಸ್ವಾಮಿ, ಶ್ರೀರಾಮಲಿಂಗಚಂದ್ರ ಚೌಡೇಶ್ವರಿ, ಶ್ರೀ ಚಂದ್ರಮೌಳೇಶ್ವರ(ಅರುಣಾಚಲೇಶ್ವರ) ಸ್ವಾಮಿ, ಶ್ರೀಮುತ್ಯಾಲಮ್ಮ, ಶ್ರೀಕಂಠೇಶ್ವರ, ಕಾಶಿ ವಿಶ್ವೇಶ್ವರ, ಕಾಳಿಕಾ ಕಮಟೇಶ್ವರ, ಅಭಯ ಚೌಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶಿವರಾತ್ರಿ ಸಂಭ್ರಮ ಕಂಡು ಬಂತು.8ಕೆಡಿಬಿಪಿ2- ನಗರೇಶ್ವರ ಸ್ವಾಮಿದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಪುಷ್ಪಾಲಂಕಾರ.
8ಕೆಡಿಬಿಪಿ3- ನಗರೇಶ್ವರ ಸ್ವಾಮಿಗೆ ವಿಶೇಷಾಲಂಕಾರ.8ಕೆಡಿಬಿಪಿ4- ನಗರೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಬೃಹತ್ ಶಿವ ಮೂರ್ತಿ ಪ್ರತಿಷ್ಠಾಪಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. 8ಕೆಡಿಬಿಪಿ5- ನಗರೇಶ್ವರ ದೇವಾಲಯದಲ್ಲಿ ದ್ರಾಕ್ಷಿ ಗೊಂಚಲುಗಳ ಆಕರ್ಷಕ ಅಲಂಕಾರ.
8ಕೆಡಿಬಿಪಿ6- ಘಾಟಿ ಸುಬ್ರಹ್ಮಣ್ಯದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.--
8ಕೆಡಿಬಿಪಿ7- ದೊಡ್ಡಬಳ್ಳಾಪುರದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ.