ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ಪ್ರಸಿದ್ಧ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾ ಶಿವರಾತ್ರಿಯಂದು ಗಿರಿಜಾ ಕಲ್ಯಾಣ, ಲಕ್ಷ ದೀಪೋತ್ಸವ ಹಾಗೂ ಶನಿವಾರದಂದು ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಅದ್ಧೂರಿಯಾಗಿ ನಡೆಯಿತು.ತಾಲೂಕಿನ ನಾಡಪ್ರಭು ರಣಭೈರೇಗೌಡ ಯುವ ಸೇವಾ ಸಂಘ ಮತ್ತು ಪ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಇವರಿಂದ ಸತತ 24ನೇ ವರ್ಷದ ಅಂಗವಾಗಿ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.
ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಹೋಮ, ಗಿರಿಜಾಕಲ್ಯಾಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಪಟ್ಟಣದ ತೇರಿನ ಬೀದಿಯಲ್ಲಿ ಶ್ರೀಗಂಗಾಧರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವಕ್ಕೆ ತಹಸೀಲ್ದಾರ್ ಮಂಜುನಾಥ್ ಚಾಲನೆ ನೀಡಿದ ಬಳಿಕ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಸಿದ್ಧರಬೆಟ್ಟದ ವೀರಭಧ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮಹಾಶಿವರಾತ್ರಿ ಹಬ್ಬವು ಪ್ರತಿಯೊಬ್ಬರಿಗೂ ಪ್ರಿಯವಾದ ಹಬ್ಬವಾಗಿದೆ. ಏಕೆಂದರೆ ನಾಡಿನೆಲ್ಲೆಡೆ ಭಕ್ತರು ಹಬ್ಬದಂದು ಉಪವಾಸ ವ್ರತವನ್ನು ಮಾಡುವುದರ ಜೊತೆಗೆ ಶಿವನ ಹತ್ತಿರವಿದ್ದು ಸ್ಮರಣೆಯನ್ನು ಮಾಡುವ ಹಬ್ಬವಾಗಿದೆ. ಗಂಗಾಧರೇಶ್ವರ ದೇವಲಾಯವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಣಭೈರೇಗೌಡರ ಯುವ ವೇದಿಕೆ ಮತ್ತು ಪ್ರೆಂಡ್ಸ್ ಗ್ರೂಪ್ ವತಿಯಿಂದ 24 ವರ್ಷಗಳಿಂದಲೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಈ ವರ್ಷವಾದರೂ ಸಹ ನಾಡಿನಲ್ಲಿ ಉತ್ತಮ ಮಳೆಯನ್ನು ಕರುಣಿಸಿ ಸಕಲ ಜೀವರಾಶಿಗಳನ್ನು ಕಾಪಾಡಿ ಭಕ್ತರ ಬೇಡಿಕೆಗಳನ್ನು ಈಡೇರಿಸಲಿ ಎಂದು ಹೇಳಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ದಕ್ಷಿಣಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಗಂಗಾಧರೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ರಣಭೈರೇಗೌಡರ ಯುವ ವೇದಿಕೆ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಸುಮಾರು 24 ವರ್ಷಗಳಿಂದ ಮಹಾಶಿವರಾತ್ರಿ ಹಬ್ಬದಂದು ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಗಿರಿಜಾ ಕಲ್ಯಾಣ ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಭಕ್ತರು ಹಬ್ಬದಂದು ಉಪವಾಸ ವ್ರತವನ್ನು ಮಾಡಿಯ ಸ್ವಾಮಿ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಎಂದರು.ರಣಭೈರೇಗೌಡರ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್, ಕೆ.ವಿ ಪುರುಷೋತ್ತಮ್, ಲೋಕೇಶ್, ಸಿಪಿಐ ಅನಿಲ್, ಪಿಎಸ್‌ಐ ಮಂಜುನಾಥ್, ಕಂದಾಯ ಇಲಾಖೆಯ ಆರ್‌ಐ ಬಸವರಾಜು, ಡಾ.ಮಲ್ಲಿಕಾರ್ಜುನ್, ರೇಣುಕಾ ಮಲ್ಲಿಕಾರ್ಜುನ್, ಪ್ರೆಂಡ್ಸ್ ಗ್ರೂಪ್‌ನ ರವಿಕುಮಾರ್, ಮಲ್ಲಣ್ಣ, ರುದ್ರಪ್ರಸಾದ್, ಅರುಣ್, ನಾಗರಾಜು, ಪ್ರದೀಪ್, ರಮೇಶ್, ಕುದುರೆ ಸತೀಶ್, ಗೋಪಿನಾಥ್, ರವಿಕುಮಾರ್ ಸೇರಿ ಮುಖಂಡರು ಹಾಜರಿದ್ದರು.