ಮಹಾತಪಸ್ವಿ ಭಗೀರಥ ಜಯಂತಿ ವಿಶಿಷ್ಟವಾಗಿ ಆಚರಣೆ

| Published : May 16 2024, 12:47 AM IST

ಸಾರಾಂಶ

ಭದ್ರಾವತಿ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ದೇವಗಂಗೆ ಭೂಮಿಗೆ ಕರೆತಂದ ಮಹಾತಪಸ್ವಿ ಭಗೀರಥ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ನಗರಸಭೆಗೆ ಕುಡಿವ ನೀರು, ಕೆರೆಗಳ ಅಭಿವೃದ್ಧಿ ಕುರಿತು ಸಲಹೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ದೇವಗಂಗೆಯನ್ನು ಭೂಮಿಗೆ ಕರೆತಂದ ಮಹಾತಪಸ್ವಿ ಶ್ರೀ ಭಗೀರಥ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ವೇದಿಕೆ ಕಚೇರಿಯಲ್ಲಿ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ರವರಿಗೆ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪರಿಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಬರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತವಾದ ಸಲಹೆ ನೀಡುವುದರ ಮೂಲಕ ಸರಳವಾಗಿ ಆಚರಿಸಲಾಯಿತು.

ಆನೆಕೊಪ್ಪ ಪಂಪ್ ಹೌಸ್‌ನಲ್ಲಿ ಇಂಟೆಕ್ ತೊಟ್ಟಿ ಸ್ವಚ್ಚಮಾಡಲು ಹಾಗೂ ಪಂಪ್‌ಹೌಸಿನಲ್ಲಿ ಕೆಟ್ಟು ಹೋಗಿರುವ ಸ್ಟಾಂಡ್ ಬೈ ಮೋಟರ್‌ ರಿಪೇರಿ ಮಾಡಲು ಜಾಕ್‌ವೆಲ್‌ನಲ್ಲಿ ಜಾಲರಿಯನ್ನು ಅಳವಡಿಸಲು ಹಾಗೂ ಜನ್ನಾಪುರ ಟ್ಯಾಂಕ್ ಸೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಆಧುನಿಕ ತಂತ್ರಜ್ಞಾನದಲ್ಲಿ ಸ್ವಚ್ಛಗೊಳಿಸಲು ಮತ್ತು ಸುಮಾರು ೩೦ ವರ್ಷ ಹಿಂದೆ ಕಟ್ಟಿರುವ ಜನ್ನಾಪುರ, ಸಿದ್ದಾಪುರ, ಹುತ್ತಾಕಾಲೋನಿ, ಉಜ್ಜನೀಪುರ, ಬುಳ್ಳಾಪುರ, ಡಿ.ಎ.ಆರ್ ಕಾಲೋನಿ ಟ್ಯಾಂಕ್‌ಗಳು ಶಿಥಿಲಗೊಂಡಿರುವುದರಿಂದ ಟ್ಯಾಂಕ್‌ಗಳ ದುರಸ್ತಿ ಕೈಗೊಳ್ಳುವುದು.

ಹೊಸ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದರ ಬಗ್ಗೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು ೭೦ ಕೆರೆಗಳಲ್ಲಿ ಅಂತರ್‌ ಜಲ ಹೆಚ್ಚಿಸಿ ಜಾನುವಾರುಗಳಿಗೆ, ರೈತರಿಗೆ, ಪ್ರಾಣಿಪಕ್ಷಿಗಳಿಗೆ ಪರಿಶುದ್ಧವಾದ ಕೆರೆ ನೀರನ್ನು ಒದಗಿಸಲು ಕೆರೆ ಅಭಿವೃದ್ಧಿ ಪಡಿಸಲು ಸರ್ಕಾರದಿಂದಾಗಲೀ ಅಥವಾ ನಗರಸಭೆ ವತಿಯಿಂದಾಗಲೀ ಯಾವುದೇ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಸರ್ಕಾರಕ್ಕೆ ಹಾಗೂ ನಗರಸಭೆಗೆ ಆರ್ಥಿಕ ಹೊರೆ ತಪ್ಪಿಸಲು, ಕೆರೆಯ ಸಮೀಪವಿರುವ ರೈತರಿಗೆ ಕೆರೆಯಲ್ಲಿ ಇರುವ ಹೂಳನ್ನು ತೆಗೆದು ಅವರವರ ಗದ್ದೆ ತೋಟಗಳಿಗೆ ಹಾಕಿಕೊಳ್ಳಲು, ನಗರಸಭೆ ವತಿಯಿಂದ ಷರತ್ತುಬದ್ಧ ಅನುಮತಿ ನೀಡಲು ಹಾಗೂ ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ತಾಲೂಕು ಆಡಳಿತದಿಂದ ಬೌಂಡರಿ ನಿಗದಿಪಡಿಸಿರುವ ಕೆರೆಗಳಲ್ಲಿ ಒತ್ತುವರಿ ತೆಗೆಯಲು ಸೂಕ್ತ ಸಲಹೆ ನೀಡಲಾಯಿತು.

ಮುಖಂಡರುಗಳಾದ ಆರ್. ವೇಣುಗೋಪಾಲ್, ಎನ್.ಎಲ್.ರಮಾ ವೆಂಕಟೇಶ್, ಗೀತಾ ರವಿಕುಮಾರ್, ಶೈಲಜಾ ರಾಮಕೃಷ್ಣ, ರಾಧಾ ಗೋಪಿ, ವಿಶ್ವೇಶ್ವರಯ್ಯ ಗಾಯಕ್‌ವಾಡ್, ಎಂ.ವಿ ಚಂದ್ರಶೇಖರ್, ಗೋಪಾಲಕೃಷ್ಣ ಸೇರಿ ಇನ್ನಿತರರು ಉಪಸ್ಥಿತರಿದ್ದರು.