ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಜೈನ ಧರ್ಮದ ೨೪ನೇ ತೀರ್ಥಂಕರರು, ಅಹಿಂಸೆ ತತ್ವವನ್ನು ಮಾನವ ಕುಲಕ್ಕೆ ಸಾರಿದ ತ್ಯಾಗಮೂರ್ತಿ ಮಹಾವೀರರ ಜಯಂತಿಯನ್ನು ನಗರದಲ್ಲಿ ಜೈನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ನಗರದ ಪಾರ್ಶ್ವನಾಥ ಜೈನ ಬಸದಿಯಲ್ಲಿ ಸಮಾವೇಶಗೊಂಡ ಜೈನ ಬಾಂಧವರು, ಮಹಾವೀರಸ್ವಾಮಿಗೆ ವಿವಿಧ ಅಭಿಷೇಕಗಳನ್ನು ಮಾಡುವ ಮೂಲಕ ಜಯಂತಿಯನ್ನು ಶ್ರದ್ಧಾ- ಭಕ್ತಿಯೊಂದಿಗೆ ಆಚರಿಸಿದರು.
ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕನಕಾಭಿಷೇಕ, ಕುಂಕುಮ ಅಭಿಷೇಕ, ಗಂಧಾಭಿಷೇಕ, ಅಷ್ಟಗಂಧಾಭಿಷೇಕ, ಪಂಚಾಮೃತ ಅಭಿಷೇಕ, ನಾನಾ ಫಲಗಳ ಅಭಿಷೇಕ, ಮಾವಿನ ಹಣ್ಣಿನ ರಸದ ಅಭಿಷೇಕ, ಕಡ್ಲಬೇಳೆ ಅಭಿಷೇಕ, ಹೆಸರು ಬೇಳೆ ಅಭಿಷೇಕ, ತುಪ್ಪದ ಅಭಿಷೇಕ, ಮೊಸರಿನ ಅಭಿಷೇಕ, ಅರಿಶಿಣದ ಅಭಿಷೇಕ ಸೇರಿ ಕನಕಪುಷ್ಪವೃಷ್ಠಿ, ಮಹಾಮಂಗಳಾರತಿ, ಚಾಮರ ಸೇವೆ ಸೇರಿ ವಿವಿಧ ಅಭಿಷೇಕಗಳಿಗೆ ಬಿಡ್ ಮೂಲಕ ಸಾರಲಾಯಿತು, ನಂತರ ಸೇವೆಯನ್ನು ವಹಿಸಿಕೊಂಡವರು ತಮ್ಮ ಪರಿವಾರ ಸಮೇತ ಸ್ವಾಮಿಗೆ ಅಭಿಷೇಕಗಳನ್ನು ನೆರವೇರಿಸಿ, ಮಹಾವೀರಸ್ವಾಮಿಯನ್ನು ಸ್ಮರಿಸಿದರು.ಮಹಿಳೆಯರು ಬಸದಿಯಲ್ಲಿ ಉಯ್ಯಾಲೋತ್ಸವ ನಡೆಸಿದರು, ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.
ಅಹಿಂಸೆಯೇ ಪರಮಧರ್ಮ, ಹಿಂಸೆಯನ್ನು ಮಾಡಬಾರದು, ಮಾನವ ಮತ್ತೊಬ್ಬ ಮಾನವನನ್ನಾಗಲಿ, ಪ್ರಾಣಿ- ಪಕ್ಷಿಗಳನ್ನಾಗಲಿ, ಸಣ್ಣ ಕೀಟಗಳನ್ನಾಗಲಿ ಹಿಂಸಿಸಬಾರದು ಎಂಬ ತತ್ವದಡಿಯಲ್ಲಿ ಮಹಾವೀರನನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪಾರ್ಶ್ವನಾಥ ಜೈನ ಸಂಘದ ಪದಾಧಿಕಾರಿಗಳು, ಜಯಶಾಮದೇವಿ ಮಹಿಳಾ ಸಂಘದ ಪದಾಧಿಕಾರಿಗಳು, ಮುಖಂಡರಾದ ನಿರ್ಮಲ ಕುಮಾರ್, ಸಿ. ಬಿ. ನಾಗೇಂದ್ರಯ್ಯ, ಸತೀಶ್, ಸುರೇಶ್ ಕುಮಾರ್, ನಾಗೇಂದ್ರಯ್ಯ, ಸಿ. ಕೆ. ಸುಭಾಷ್, ಸಿ. ಎಸ್. ಪದ್ಮಪ್ರಸಾದ್, ಸಿ.ಬಿ.ಪ್ರದೀಪ್ ಕುಮಾರ್, ಸಿ.ಬಿ.ಬ್ರಹ್ಮದೇವ್,. ಸಿ.ವಿ.ನಾಗರಾಜಯ್ಯ, ಸತೀಶ್, ವಿಜಯಕುಮಾರ್, ಸಿ.ಎನ್. ಬ್ರಹ್ಮೇಶ್, ರಾಜೇಂದ್ರಕುಮಾರ್, ಪದ್ಮನಾಭ, ರಮೇಶ್, ಪದ್ಮಶ್ರೀ, ರಶ್ಮಿತಾ, ಲಕ್ಷ್ಮೀ, ವಿದ್ಯಾ, ವನಿತಾ, ವಾಣಿ, ಅಕ್ಷತಾ ಇತರರು ಭಾಗವಹಿಸಿದ್ದರು.