ಸಾರಾಂಶ
ದಾವಣಗೆರೆ: ದಿಗಂಬರ ಜೈನ ಸಮಾಜ, ಮಹಾವೀರ ಯುವ ಮಂಚ್, ಚೌಕಿಪೇಟೆಯ ಸುಪಾರ್ಶ್ವನಾಥ ಶ್ವೇತಾಂಬರ ಮಂದಿರದ ಸಹಯೋಗದಲ್ಲಿ ಸಮಾಜ ಬಾಂಧವರೊಂದಿಗೆ ಗುರುವಾರ ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ 2624ನೇ ಜಯಂತಿಯನ್ನು ಸಂಭ್ರಮ ಸಡಗರದಿಂದ ಶ್ರದ್ಧಾ ಭಕ್ತಿಯಿಂದ ವಿವಿಧ ಪೂಜೆ, ಅಭಿಷೇಕ, ಭವ್ಯ ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು.
ಮಹಾವೀರ ಜಯಂತಿ ಹಬ್ಬದ ಹಿನ್ನಲೆಯಲ್ಲಿ ಗುರುವಾರ ಮುಂಜಾನೆ ಮಹಾವೀರ ತೀರ್ಥಂಕರರಿಗೆ 108 ಕಳಸಾಭಿಷೇಕ ಜೊತೆಗೆ ಗಂಧಾಭಿಷೇಕ, ಎಳೆನೀರು, ಕ್ಷೀರ, ಕಬ್ಬಿನ ಹಾಲಿನ ಅಭಿಷೇಕ, ಕಳಶ ಅಭಿಷೇಕ ನೆರವೇರಿದವು.ನಂತರ ಮಹಾವೀರ ಸ್ವಾಮಿ ಮೆರವಣಿಗೆಯು ಜಾನಪದ ಕಲಾ ತಂಡಗಳೊಂದಿಗೆ ನರಸರಾಜ ಪೇಟೆಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಆರಂಭಗೊಂಡು ನರಸರಾಜ ರಸ್ತೆ, ಮಂಡಿಪೇಟೆ, ಲಕ್ಷ್ಮಿ ಸರ್ಕಲ್, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆಯ ಸುಪಾರ್ಶ್ವನಾಥ ಮಂದಿರ ಮಾರ್ಗವಾಗಿ ಹಾಸಭಾವಿ ಸರ್ಕಲ್ ಮೂಲಕ ಪಾರ್ಶ್ವನಾಥ ಮಂದಿರಕ್ಕೆ ಮುಕ್ತಾಯಗೊಂಡಿತು.
ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ ಭಗವಾನ್ ಮಹಾವೀರ ತೀರ್ಥಂಕರ ಬಾಲ ಲೀಲೋತ್ಸವ, ತೊಟ್ಟಿಲು ಕಾರ್ಯಕ್ರಮ ನೆರವೇರಿದವು. ನಂತರ ಸಿಹಿ ವಿತರಣೆ ಮಾಡಲಾಯಿತು.ಸಮಾಜದ ಮುಖಂಡರಾದ ಅಜಿತ್‌ಕುಮಾರ, ಜಿತೇಂದ್ರಕುಮಾರ, ಧರಣೇಂದ್ರ ಪ್ರಸಾದ್, ಕೋಮಲ್, ಮಹೇಂದ್ರ ಹೊಳಲು, ಜ್ವಾಲಾ ಪ್ರಸಾದ್, ಪ್ರವೀಣ್, ವಿಜಯಕುಮಾರ ಜೈನ್, ಮಹಾವೀರ ಯುವ ಮಂಚ್, ಪಾರ್ಶ್ವನಾಥ ದೇವಸ್ಥಾನ ಟ್ರಸ್ಟ್, ಮಹಾವೀರ ಸಂಘ, ಪದ್ಮಾಂಬ ಮಹಿಳಾ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು, ಸರ್ವ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು.