ಮಾನವ ಜನಾಂಗಕ್ಕೆ ಮಹಾವೀರರು ಬಹು ಮುಖ್ಯ ‘ಬದುಕು ಮತ್ತು ಬದುಕಲು ಬಿಡು’ ಎಂಬ ಸಂದೇಶವನ್ನು ಸಾರಿದರು, ಮಹಾವೀರರ ಈ ಪ್ರಸಿದ್ಧ ಸಂದೇಶವು ಸಕಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕಿದೆ ಮತ್ತು ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಸಹಬಾಳ್ವೆಯಿಂದ ಇರಬೇಕು ಎಂಬುದನ್ನು ಅರ್ಥೈಸುತ್ತದೆ.

ಕನ್ನಡಪ್ರಭ ವಾರ್ತೆ ಆಲೂರು

ಜಗತ್ತಿಗೆ ಸತ್ಯ, ಧರ್ಮ, ಶಾಂತಿ, ಅಹಿಂಸೆಯ ತತ್ವಗಳನ್ನು ಬೋಧಿಸಿದ ಭಗವಾನ್ ಮಹಾವೀರರ ತತ್ವಗಳು ಮಾನವ ಕುಲಕ್ಕೆ ಆದರ್ಶಪ್ರಾಯವಾಗಿದ್ದು, ಇಂದಿಗೂ ಕೂಡ ಪ್ರಸ್ತುತವಾಗಿವೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.

ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರರ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮದಿನವನ್ನು ''''ಮಹಾವೀರ ಜಯಂತಿ'''' ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಜೈನ ಧರ್ಮೀಯರಿಗೆ ಅತ್ಯಂತ ಪವಿತ್ರ ದಿನವಾಗಿದೆ. ಮಹಾವೀರರು ಕ್ರಿಪೂ 599 ರಲ್ಲಿ ಬಿಹಾರದ ಕುಂಡಲಗ್ರಾಮದಲ್ಲಿ ಜನಿಸಿದರು. ಇವರ ತಂದೆ ರಾಜ ಸಿದ್ಧಾರ್ಥ ಮತ್ತು ತಾಯಿ ರಾಣಿ ತ್ರಿಶಲಾ ದೇವಿ. ಇವರ ಬಾಲ್ಯದ ಹೆಸರು ವರ್ಧಮಾನ, ಇವರು ತಮ್ಮ 30ನೇ ವಯಸ್ಸಿನಲ್ಲಿ ಸರ್ವ ಸುಖಗಳನ್ನು ತ್ಯಜಿಸಿ, ಸತ್ಯದ ಅನ್ವೇಷಣೆಗಾಗಿ ತಪಸ್ಸಿಗೆ ತೆರಳಿದರು. 12 ವರ್ಷಗಳ ಕಠಿಣ ತಪಸ್ಸಿನ ನಂತರ ಅವರಿಗೆ ''''ಕೇವಲ ಜ್ಞಾನ'''' (ಸರ್ವಜ್ಞತೆ) ಪ್ರಾಪ್ತಿಯಾಯಿತು.

ಭಗವಾನ್ ಮಹಾವೀರರು ಲೋಕಕ್ಕೆ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಅಪರಿಗ್ರಹ ಎಂಬ 5 ಮುಖ್ಯ ತತ್ವಗಳನ್ನು ಬೋಧಿಸಿದರು ಎಂದು ತಿಳಿಸಿದರು.

ಮಾನವ ಜನಾಂಗಕ್ಕೆ ಮಹಾವೀರರು ಬಹು ಮುಖ್ಯ ‘ಬದುಕು ಮತ್ತು ಬದುಕಲು ಬಿಡು’ ಎಂಬ ಸಂದೇಶವನ್ನು ಸಾರಿದರು, ಮಹಾವೀರರ ಈ ಪ್ರಸಿದ್ಧ ಸಂದೇಶವು ಸಕಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕಿದೆ ಮತ್ತು ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಸಹಬಾಳ್ವೆಯಿಂದ ಇರಬೇಕು ಎಂಬುದನ್ನು ಅರ್ಥೈಸುತ್ತದೆ ಎಂದು ಹೇಳಿದರು.

ಮಹಾವೀರರು ತಮ್ಮ 72ನೇ ವಯಸ್ಸಿನಲ್ಲಿ ಬಿಹಾರದ ಪಾವಾಪುರಿಯಲ್ಲಿ ನಿರ್ವಾಣ ಹೊಂದಿದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಅಂಕೇಗೌಡ, ಶಿರಸ್ತೇದಾರ್ ಮಧು, ಆಹಾರ ನಿರೀಕ್ಷಕ ಮೋಹನ್ ಕುಮಾರ್, ಸೇರಿ ತಾಲೂಕು ಕಚೇರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.