ಕುಕನೂರು ಪಟ್ಟಣದ ಸಮುದಾಯ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಭಗವಾನ್ ಮಹಾವೀರರ ಜಯಂತಿ ಆಚರಿಸಲಾಯಿತು.
ಕುಕನೂರು: ಮನುಷ್ಯನ ಆತ್ಮ ಶುದ್ಧವಾಗಿರಲು ಅಹಿಂಸಾ ಮಾರ್ಗ ಪರಿಶುದ್ಧವಾದುದು. ಅಹಿಂಸಾ ಧರ್ಮದ ತತ್ವವನ್ನು ಇಡೀ ವಿಶ್ವಕ್ಕೆ ಮಹಾವೀರರು ಸಾರಿದರು ಎಂದು ಸಮುದಾಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಭಗವಾನ್ ಮಹಾವೀರರ ಜಯಂತಿ ಆಚರಿಸಿ ಮಾತನಾಡಿದ ಅವರು, ತ್ಯಾಗ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ತ್ಯಾಗ ಮನೋಭಾವನೆ ಬರುವುದು ಮನುಷ್ಯನ ಆತ್ಮಶುದ್ಧಿಯಿಂದ. ಮನುಷ್ಯನ ಆತ್ಮಶುದ್ಧಿ ಆಗಬೇಕಾದರೆ ಮನುಷ್ಯನಲ್ಲಿ ಅಹಿಂಸಾ ಗುಣ ಬರಬೇಕು. ಅಹಿಂಸಾ ಗುಣ ಎನ್ನುವುದು ಕೈಯಿಂದ ಕೆಟ್ಟದ್ದು ಮಾಡದೇ ಇರುವುದು ಮಾತ್ರವಲ್ಲ, ಮನಸ್ಸಿನಲ್ಲೂ ಇನ್ನೊಬ್ಬರ ಬಗ್ಗೆ ಕೆಟ್ಟ ಆಲೋಚನೆ ಮಾಡದಿರುವುದು. ಯಾವ ಮನುಷ್ಯ ತನ್ನ ಮನಸ್ಸಿನಲ್ಲಿ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸುವುದಿಲ್ಲವೋ, ಆ ವ್ಯಕ್ತಿ ನಿಜವಾದ ಮನುಷ್ಯನಾಗುತ್ತಾನೆ. ಮಹಾವೀರರು ಸಹ ಪ್ರತಿ ವ್ಯಕ್ತಿ ಅಹಿಂಸಾ ಪ್ರತಿಪಾದಕ ಆಗಬೇಕು ಎಂದು ಬಯಸಿದರು ಎಂದರು.ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಮುಖ್ಯ. ಉತ್ತಮ ಆರೋಗ್ಯಕ್ಕೂ ಅಹಿಂಸಾ ಮಾರ್ಗಕ್ಕೂ ಅನ್ಯೋನ್ಯ ಸಂಬಂಧವಿದೆ. ಯಾವ ಮನುಷ್ಯನ ಮನಸ್ಸು ಶಾಂತವಾಗಿರುತ್ತದೆಯೋ, ಆ ವ್ಯಕ್ತಿಯ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯ ಸಹ ಚೆನ್ನಾಗಿರುತ್ತದೆ. ಆರೋಗ್ಯವಾಗಿರಲು ಮೊದಲ ಹೆಜ್ಜೆ ಶಾಂತತೆ ಹಾಗೂ ಅಹಿಂಸಾ ಗುಣ ಎಂದರು.
ಸ್ತ್ರೀ ರೋಗ ತಜ್ಞೆ ಡಾ. ಪ್ರಿಯಾಂಕಾ, ಡಾ. ಶ್ವೇತಾ, ಸಿಬ್ಬಂದಿ ವೀರಸಂಗಯ್ಯ, ಲಿಂಗರಾಜ, ಶಿಲ್ಪಾ, ರಮ್ಯಾ, ಮಂಜುಳಾ, ಲಕ್ಷ್ಮಣ, ಗ್ಯಾನೇಶ ಇತರರಿದ್ದರು.ಮಂಗಳೂರಿನಲ್ಲಿ ಮಹಾವೀರರ ಜನ್ಮ ಕಲ್ಯಾಣೋತ್ಸವ: ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಪಾರ್ಶ್ವನಾಥ ಜೈನ ಬಸದಿಯಲ್ಲಿ ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ಬಸದಿಗಳನ್ನು ಹಸಿರು ತೋರಣಗಳಿಂದ ಹೂವಿನ ಹಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಬೆಳಗ್ಗೆ ತೀರ್ಥಂಕರ ಮೂರ್ತಿಗೆ ಅಭಿಷೇಕ, ಪಂಚಾಮೃತ, ಜೈನ ಧರ್ಮದ ಅಹಿಂಸಾ ತತ್ವಗಳನ್ನು ಹಾಗೂ ತ್ಯಾಗದ ಮಹಿಮೆಯನ್ನು ಮಂತ್ರ ಹಾಗೂ ಹಾಡುಗಳ ಮುಖಾಂತರ ತಿಳಿಸಲಾಯಿತು. ಶ್ರಾವಕಿಯರು ಕುಂಭ ಹೊತ್ತು ಗಂಗೆಪೂಜೆ ನೇರವೇರಿಸಿದರು.ಆನಂತರ ಶ್ರಾವಕಿಯರು ಮಹಾವೀರನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಪ್ರತಿಷ್ಠಾಪಿಸಿ, ಪೂಜಾ ವಿಧಿ ವಿಧಾನಗಳನ್ನು ಪೂರೈಸಿದರು. ಮಹಾವೀರನ ತೊಟ್ಟಿಲ ಅಲಂಕಾರ, ಸೋದರತ್ತೆ ಸವಾಲು, ಮಹಾವೀರನ ತಾಯಿಯ ಸವಾಲು, ಚಾಮರರ ಸವಾಲು, ಕಾರ್ಯಕ್ರಮ ನೆರವೇರಿದವು.ಆನಂತರ ಮಹಾವೀರನ 2625ನೇ ಜನ್ಮ ಕಲ್ಯಾಣೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಹಾವೀರನ ಆತ್ಮಚರಿತ್ರೆ, ಅವರ ಅಹಿಂಸೆ, ತ್ಯಾಗ, ಸತ್ಯಮಾರ್ಗದ ತತ್ವಗಳನ್ನು ಬೋಧಿಸಲಾಯಿತು.ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ ಮಹಾವೀರನ ಜಯಂತಿ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಅನ್ನ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು. ಸಾಯಂಕಾಲ ಮಹಾವೀರರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜೈನ ಸಮಾಜದ ಬಾಂಧವರು, ಪ್ರಮುಖರಿದ್ದರು.