ಯುದ್ಧ ಭೀತಿಯಲ್ಲಿರುವ ಜಗತ್ತಿಗೆ ಭಗವಾನ್ ಮಹಾವೀರರ ಅಂಹಿಸೆ ಮತ್ತು ಶಾಂತಿಯ ಸಂದೇಶ ಪಾಲನೆ ಬಹುಮುಖ್ಯವಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಕೊಟ್ಟೂರು: ಯುದ್ಧ ಭೀತಿಯಲ್ಲಿರುವ ಜಗತ್ತಿಗೆ ಭಗವಾನ್ ಮಹಾವೀರರ ಅಂಹಿಸೆ ಮತ್ತು ಶಾಂತಿಯ ಸಂದೇಶ ಪಾಲನೆ ಬಹುಮುಖ್ಯವಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಸೋಮವಾರ ಭಗವಾನ್ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ, ಜೀವಿಸುವ ಹಕ್ಕಿದೆ. ಅಹಿಂಸೆ ಮಾರ್ಗದ ಮೂಲಕ ನೋವು ನೀಡದೆ ಮಾನವ ಹೇಗೆ ಜೀವಿಸಬೇಕೆನ್ನುವ ಮಾರ್ಗದರ್ಶವನ್ನು ನೀಡಿದ ಮಹಾನ್ ಸಂತರು ಮಹಾವೀರರು.

ವಿಶೇಷ ಉಪನ್ಯಾಸ ನೀಡಿದ ಕೊಟ್ರೇಶ್ ಶಿಕ್ಷಕರು ಮನುಷ್ಯನ ಜೀವನಕ್ಕೆ ವೈಭೋಗ, ಸಂಪತ್ತು ಬೇಕಿಲ್ಲ. ಅದಿಲ್ಲದಿದ್ದರೂ ಸಂತೋಷವಾಗಿ ಬದುಕಬಹುದು ಎಂದು ಸಂದೇಶ ನೀಡಿದರು. ಅವರು ವೈಭೋಗದ ರಾಜ ಮನೆತನದಲ್ಲಿ ಜನಿಸಿದರೂ ಎಲ್ಲವನ್ನೂ ತಿರಸ್ಕರಿಸಿ 12 ವರ್ಷಗಳ ತಪಸ್ಸನ್ನಾಚರಿಸಿ ಜ್ಞಾನ ಸಂಪಾದಿಸಿ ಅದನ್ನು ಸಮಾಜಕ್ಕೆ ಹಂಚಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಸುರೇಶ ಚಿನಮನಹಳ್ಳಿ, ತಾಲೂಕು ದಿಗಂಬರ ಜೈನ ಸಂಘದ ಅಧ್ಯಕ್ಷ ಬ್ರಹ್ಮೇಶ್ ಕುಮಾರ, ನೌಕರರ ಸಂಘದ ಅಧ್ಯಕ್ಷ ಯೋಗೇಶ್ವರ ದಿನ್ನೆ, ಜೈನ ಸಮಾಜದ ಮುಖಂಡರಾದ ಕೊಟ್ರಪ್ಪ ಜೈನ್, ಕಿರಣ್ ಕುಮಾರ್ ಜೈನ್, ಪ್ರದೀಪ್ ಕುಮಾರ್ ಜೈನ್ ಮುಂತಾದವರು, ಕಂದಾಯ ನಿರೀಕ್ಷಕ ಶಿವಕುಮಾರ ಡಿ., ಭೂಮಾಪಕ ಭರಮಪ್ಪ, ಗ್ರಾಮ ಲೆಕ್ಕಿಗ ಹರೀಶ ಹಾಗೂ ಇತರರು ಹಾಜರಿದ್ದರು. ಸಿ.ಮ. ಗುರುಬಸವರಾಜ ನಿರೂಪಿಸಿದರು.

ಭಗವಾನ್‌ ಮಹಾವೀರರ ಜಯಂತಿ

ಹೂವಿನಹಡಗಲಿ: ತಾಲೂಕಿನ ಮಾಗಳ ಮತ್ತು ಹೂವಿನಹಡಗಲಿಯಲ್ಲಿ ಜೈನ ಸಮಾಜದವರು, ಭಗವಾನ್‌ ಮಹಾವೀರರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು.ಭಗವಾನ್‌ ಮಹಾವೀರರ ಭಾವಚಿತ್ರವನ್ನು ಸಕಲ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮಹಾವೀರರ ಜಯಂತಿ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಮೆರವಣಿಗೆ ಆರಂಭವಾಗಿ, ಜೈನ್‌ ಮಂದಿರದ ವರೆಗೆ ಸಾಗಿತು. ಈ ವೇಳೆ ಮಹಾವೀರ ಮೂರ್ತಿ ಭವ್ಯ ಮೆರವಣಿಗೆ ಜರುಗಿತು. ಸಮುದಾಯದ ಸಂಪ್ರದಾಯದಂತೆ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಶ್ರೀ ಮಹಾವೀರತೀರ್ಥಂಕರರಿಗೆ ತೊಟ್ಟಿಲು ತೂಗುವ ಕಾರ್ಯಕ್ರಮ ನಾಮಕರಣ, ಪಂಚಾಮೃತ ಪೂಜೆ ಹೀಗೆ ವಿಧಿ ವಿಧಾನದ ಪೂಜೆಗಳು ನಡೆದವು. ಅಲಂಕೃತ ವಾಹನದಲ್ಲಿ ಭವ್ಯ ಮೂರ್ತಿ ಮೆರವಣಿಗೆ ನಡೆಯಿತು. ವಿವಿಧ ಹೂಗಳಿಂದ ಮೂರ್ತಿಯನ್ನು ಸಿಂಗರಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಮುದಾಯ ಜನರು ದಾರಿಯುದ್ದಕ್ಕೂ ವಾದ್ಯಗಳ ಸಂಗೀತಕ್ಕೆ ನೃತ್ಯ ಮಾಡುತ್ತ ಹಾಡುತ್ತ ನಕ್ಕು ನಲಿದು ಭಕ್ತಿಪೂರ್ವಕವಾಗಿ ಮಹಾವೀರರನ್ನು ಸ್ಮರಿಸಿದರು.

ಮೆರವಣಿಗೆಯಲ್ಲಿ ತಹಸೀಲ್ದಾರ ಕೆ.ಎಂ. ಗುರುಬಸವರಾಜ್, ಸಂತೋಷ ಜೈನ್, ದಿಗಂಬರ ಜೈನ್ ಸಮಾಜ ಅಧ್ಯಕ್ಷ ಎಚ್.ಎಸ್‌. ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಅಮಿತ್ ಎಚ್.ಜೆ., ಅಜಿತ್ ಎಚ್.ಡಿ., ಎಚ್.ಡಿ. ರಾಯಪ್ಪ, ಪ್ರಸನ್ನ, ಡಾ. ಧರ್ಮಣ್ಣ, ಬಾಹುಬಲಿ ಪಾಟೀಲ್, ಪದ್ಮರಾಜ್ ಜೈನ್, ಎಂ. ಭರತೇಶ್, ರತ್ನಾಕರ್ ಜೈನ್, ರಾಜಣ್ಣ, ಜ್ವಾಲಾ ಮಾಲಿನಿ ಮಹಿಳಾ ಸಮಾಜದ ಎಚ್. ಸೀಮಾ, ಪದ್ಮಾವತಿ ಎಂ.ಡಿ., ಚಂಪರಾಯಪ್ಪ ಹಾಗೂ ಜೈನ್ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

ತಾಲೂಕಿನ ಮಾಗಳ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಭಗವಾನ್‌ ಮಹಾವೀರರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಗ್ರಾಮದ ಜೈನ ಬಸದಿಯಲ್ಲಿ ಬೆಳಗಿನಿಂದ ಮಹಾವೀರ ಸ್ವಾಮಿಗೆ ವಿವಿಧ ಪೂಜೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗುಂಜಾಳ್‌ ಭುಜಬಲಿ ಸಾಹುಕಾರ್‌, ಎಂ.ಶಾಂತರಾಜ, ಎಂ. ಜಯಣ್ಣ, ನೇಮಿರಾಜ ಸೇರಿದಂತೆ ಶ್ರಾವಕಿಯರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.