ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅಂಗಸಂಸ್ಥೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಇದರ ವಾರ್ಷಿಕ ಸಮಾವೇಶ ಫಿನ್ನೆಂಟ್ 25ರ ಎರಡನೇ ಆವೃತ್ತಿ ನಡೆಯಿತು.ಉದ್ಯಮ ವಲಯದ ನಾಯಕರು, ಸಂಶೋಧಕರು ಮತ್ತು ಶಿಕ್ಷಣ ತಜ್ಞರನ್ನು ಒಟ್ಟುಗೂಡಿಸಲು, ಹಣಕಾಸು, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ವಿಕಸನದ ಕಲ್ಪನೆ ಅನ್ವೇಷಿಸಲು ಈ ಈ ಸಮಾವೇಶ ಆಯೋಜಿಸಲಾಗಿತ್ತು.
ಎಂಐಟಿ ಮಣಿಪಾಲದ ಮಾನವಿಕ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಎಫ್ಐಎಸ್ ಗ್ಲೋಬಲ್, ಡಲಾಬ್ಸ್ ಹೈದ್ರಾಬಾದ್, ಯಂಗ್ ಇಂಡಿಯನ್ಸ್ ಮಂಗಳೂರು ಸಹಯೋಗ ನೀಡಿದ್ದವು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ, ಬ್ಯಾಂಕ್ ಆಫ್ ಬಹ್ರೇನ್ ಮತ್ತು ಕುವೈತ್ ಇದರ ಸಿಇಒ ಮಾಧವ್ ನಾಯರ್ ಈ ಸಮಾವೇಶ ಉದ್ಘಾಟಿಸಿದರು.
ಅವರು ಎಂಐಟಿಯ 1993 ರ ಬ್ಯಾಚ್‌ನ ಹಳೆ ವಿದ್ಯಾರ್ಥಿಯಾಗಿದ್ದಾರೆ. ನಾಯರ್ ಅವರು ಎಂಜಿನಿಯರಿಂಗ್ ಕ್ಷೇತ್ರದಿಂದ ಬ್ಯಾಂಕಿಂಗ್ ಕ್ಷೇತ್ರದತ್ತ ತಮ್ಮ ಯಾನ ಸಾಗಿಬಂದ ದಾರಿಯನ್ನು ಹೇಳಿದರು. ವೃತ್ತಿ ಕ್ಷೇತ್ರದಲ್ಲಿ ಎದುರಿಸಿದ ಆರ್ಥಿಕ ಪಲ್ಲಟಗಳನ್ನು ವಿಶ್ಲೇಷಿಸಿದ ಅವರು, ಯಾವುದೇ ಬದಲಾವಣೆಗೆ ಸಿದ್ಧರಿರುವಂತೆ, ಹೊಸ ಪ್ರವೃತ್ತಿಗಳ ಬಗ್ಗೆ ಎಚ್ಚರವಾಗಿರುವಂತೆ, ನಿರಂತರ ಜ್ಞಾನ ಸಾಧನೆಯೊಂದಿಗೆ ಜವಾಬ್ದಾರಿಯುತ ನಾವೀನ್ಯತೆ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಗೌರವ ಅತಿಥಿ ಎಫ್‌ಐಎಸ್ ಗ್ಲೋಬಲ್ (ಭಾರತ ಮತ್ತು ಫಿಲಿಪೈನ್ಸ್)ನ ಉಪಾಧ್ಯಕ್ಷ ರಾಮ್‌ಕುಮಾರ್ ನಾರಾಯಣ್ ಗೌರವ, ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ಹಣಕಾಸು ಭವಿಷ್ಯವನ್ನು ವ್ಯಾಖ್ಯಾನಿಸುತ್ತಾ, ಈ ಕ್ಷೇತ್ರಗಳನ್ನು ಸಂಶೋಧನೆಗಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಐಡಿಯಾರ್ತ್‌ನ ಸಂಸ್ಥಾಪಕ ಉಪೇಂದ್ರ ನಂಬೂರಿ ಅವರು ‘ಫಿನ್‌ಟೆಕ್‌ನಲ್ಲಿ ಹೊಸ ಯುಗದ ಉದ್ಯಮಶೀಲತೆಯ ಅವಕಾಶಗಳು’ ಬಗ್ಗೆ ಮಾತನಾಡಿದರು. 2011ನೇ ಬ್ಯಾಚಿನ ಎಂಐಟಿ ಹಳೆ ವಿದ್ಯಾರ್ಥಿ ಮತ್ತು ಬಿಟ್ ಸೇವ್ ಟೀಂ ಸದಸ್ಯ ಶಿವರಾಮ್ ಕೃಷ್ಣ ಪಾಂಡೆ ಬಿಟ್ ಕಾಯಿನ್ - ಕ್ರಿಪ್ಟೋಕರೆನ್ಸಿಯ ಪ್ರಸ್ತುತತೆ ಮತ್ತು ಭವಿಷ್ಯದ ಕುರಿತು ಚರ್ಚಿಸಿದರು.ಫ್ಲಿಪ್ಕಾರ್ಟ್ ಉಪಾಧ್ಯಕ್ಷ ಡಾ. ವರದರಾಜು ಜನಾರ್ದನನ್ ಉದ್ಯಮಶೀಲತೆಯ ಮನಃಸ್ಥಿತಿ, ನಾಯಕತ್ವ ಮತ್ತು ಹೊಸತನದ ಬಗ್ಗೆ ಮಾತನಾಡಿದರು
ಎಂಐಟಿ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.ಡಾ. ಯೋಗೇಶ್ ಪೈ ಪಿ. ಜೊತೆಗೆ ಲಿಡ್ವಿನ್ ಕೆನ್ನೆತ್ ಮೈಕೆಲ್ ಮತ್ತು ಡಾ.ರಾಜೇಶ್ ಆರ್ ಪೈ ಕಾರ್‍ಯಕ್ರಮದ ಸಂಚಾಲಕರಾಗಿದ್ದರು. ಡಾ.ಎ.ಎಸ್. ಸುಮುಖ್ ಎಸ್ ಹುನಗುಂದ ಮತ್ತು ಡಾ.ರವೀಂದ್ರರಾವ್ ಕಾರ್‍ಯಕ್ರಮದ ಸಹ ಸಂಚಾಲಕರಾಗಿದ್ದರು.