ಸಾರಾಂಶ
ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಬಂಧನ
ಕನ್ನಡಪ್ರಭ ವಾರ್ತೆ ಉಡುಪಿಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬ್ರಹ್ಮಾವರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಮುಂದೆ ಇಂತಹ ನ್ಯೂ ಸೆನ್ಸ್ ಮಾಡಕೂಡದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಮಹೇಶ್ ಶೆಟ್ಟಿ ಅವರನ್ನು ಬ್ರಹ್ಮಾವರ ಠಾಣೆಯ ಪೊಲೀಸರು ಗುರುವಾರ ಉಜಿರೆಯ ತಿಮರೋಡಿಯಲ್ಲಿರುವ ಮನೆಯಿಂದ ಬಂಧಿಸಿದ್ದರು. ನಂತರ ಅವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ ತಿಮರೋಡಿ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಶನಿವಾರ ಈ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾದ ನಾಗೇಶ್ ಎನ್.ಎ. ಅವರು ಜಾಮೀನು ಮಂಜೂರು ಮಾಡಿದ್ದಾರೆ.2 ಗಂಟೆ ಪೊಲೀಸ್ ಕಸ್ಟಡಿ:ಇದಕ್ಕೆ ಮೊದಲು ಬೆಳಗ್ಗೆ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಆರೋಪಿ ತಿಮರೋಡಿ ಅವರನ್ನು ಹೆಚ್ಚಿನ ವಿಚಾರಣೆ ಮತ್ತು ಮಹಜರಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು, ಬಂಧಿಸಿದ ದಿನವೇ ಯಾಕೆ ಕಸ್ಟಡಿಗೆ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಾಹ್ನ 1.30ರೊಳಗೆ ಆರೋಪಿಯನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಆದೇಶಿಸಿದರು.ಅದರಂತೆ ಪೊಲೀಸರು ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಕರೆ ತಂದರು. ನ್ಯಾಯಾಧೀಶರು ಕೇವಲ 2 ಗಂಟೆ ಪೊಲೀಸ್ ಕಸ್ಟಡಿಗೆ ನೀಡಿ, 3.30ಕ್ಕೆ ಮತ್ತೆ ಹಾಜರುಪಡಿಸಲು ಆದೇಶಿಸಿದರು.ಈ 2 ಗಂಟೆಗಳಲ್ಲಿ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ, ಎಸ್ಸೈ ಅಶೋಕ್ ಮಾಲಬಾಗಿ ಆರೋಪಿಯನ್ನು ಉಡುಪಿ ನಗರ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ಪಡೆದುಕೊಂಡರು. 4 ಗಂಟೆಗೆ ಮತ್ತೆ ತಿಮರೋಡಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದರು.ಬಂಧನ ಕ್ರಮಬದ್ಧವಾಗಿಲ್ಲ:
ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರಾದ ವಿಜಯವಾಸು ಪೂಜಾರಿ ವಾದ ಮಂಡಿಸಿ, ತಿಮರೋಡಿ ಅವರನ್ನು ಪೊಲೀಸರು ಬಂಧಿಸಿದ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ, ಪೊಲೀಸರು ಅವರಿಗೆ ಮೊದಲ ನೋಟಿಸ್ ನೀಡಿ ಅದರ ಅವಧಿ ಮುಗಿಯುವ ಮೊದಲೇ ಎರಡನೇ ನೋಟಿಸ್ ನೀಡಿದ್ದಾರೆ. ಅವರ ಮೇಲೆ ಕೋಮು ಸೌಹಾರ್ದ ಕೆಡಿಸಿದ ಆರೋಪ ಹೋರಿಸಲಾಗಿದೆ. ಆದರೆ ಅವರ ಹೇಳಿಕೆಯಿಂದ ಯಾವುದೇ ಕೋಮು ಗಲಭೆಗಳಾಗಿಲ್ಲ, ಅವರು ಕೂಡ ಓರ್ವ ಹಿಂದೂ ನಾಯಕ, ಅವರು ಬೇರೆ ಧರ್ಮಗಳನ್ನು ದೂಷಿಸಿಲ್ಲ, ಆದ್ದರಿಂದ ಅವರಿಗೆ ಜಾಮೀನು ನೀಡುವಂತೆ ವಿನಂತಿಸಿದರು.ಜಾಮೀನು ನೀಡುವುದಕ್ಕೆ ಸರ್ಕಾರಿ ಅಭಿಯೋಜಕಿ ಮೋಹಿನಿ ಆಕ್ಷೇಪ ಸಲ್ಲಿಸಿದರು. ಆದರೆ ಎರಡೂ ವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.