ಸಾರಾಂಶ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರು ಅವಾಚ್ಯ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಚೇರಿ ಎದುರು ಶುಕ್ರವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಚಿವ ಸಂಪುಟದ ಸದಸ್ಯರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿರುವ ಪದ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ಹಾಸನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರು ಅವಾಚ್ಯ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಚೇರಿ ಎದುರು ಶುಕ್ರವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್ ಮಾತನಾಡಿ, ಸಿ ಟಿ ರವಿ ಅವರು ಬಿಜೆಪಿ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರು ಮಹಿಳೆಯರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವುದು ಮಹಿಳೆಯರಿಗೆ ಅವರು ತೋರಿಸುವ ಗೌರವವನ್ನು ಸೂಚಿಸುತ್ತದೆ. ತುಂಬಿದ ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿರುವ ಪದ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. "ಬೇಟಿ ಬಚಾವೋ ಬೇಟಿ ಪಡಾವೋ " ಎಂಬ ಮಾತುಗಳನ್ನು ಆಡುವ ಅವರದೇ ಪಕ್ಷದ ಪ್ರಧಾನಿ ಅವರು ಸಿ.ಟಿ. ರವಿ ಅವರ ಮಾತುಗಳಿಗೆ ಉತ್ತರ ನೀಡಬೇಕು ಎಂದರು.
ಈ ಹಿಂದೆ ಚಿಕ್ಕಮಗಳೂರಿನಲ್ಲಿ ಅಲ್ಲಿನ ಜನ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಕೇಂದ್ರದ ನಾಯಕರು ಆತನನ್ನು ಎಂಎಲ್ಸಿ ಮಾಡುವ ಮೂಲಕ ಹೊಲಸು ಮಾತುಗಳನ್ನು ಆಡುವ ಸಿ ಟಿ ರವಿ ಅವರನ್ನು ಮಹಿಳೆಯರ ವಿರುದ್ಧ ಮಾತನಾಡಲು ಬಿಟ್ಟಿದ್ದಾರೆ. ಅವರು ಇದೇ ರೀತಿ ಮಾತುಗಳನ್ನು ಆಡುತ್ತಿದ್ದರೆ ಮಹಿಳೆಯರಿಂದಲೇ ತಕ್ಕ ಶಾಸ್ತಿ ಆಗಲಿದೆ ಎಂದು ಎಚ್ಚರಿಸಿದರು. ಅವರ ಮನೆಯಲ್ಲಿ ಕೂಡ ಮಹಿಳೆಯರು ಇದ್ದಾರೆ. ಅವರ ಬಗ್ಗೆಯೂ ಸಿಟಿ ರವಿ ಹೀಗೆ ಮಾತನಾಡುತ್ತಾರೆಯೆ? ಎಂದು ಪ್ರಶ್ನಿಸಿದ ಅವರು, ಕೂಡಲೇ ಕೇಂದ್ರ ಸರ್ಕಾರ ಅವರ ಎಂಎಲ್ಸಿ ಸ್ಥಾನವನ್ನು ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶೃತಿ, ಪಾರ್ವತಿ, ಕಮಲಮ್ಮ, ವಸಂತ, ಸರೋಜಾ, ನೇತ್ರ, ಮಂಜುಳಾ ಬಾಯಿ, ರಘು ದಾಶರಕೊಪ್ಪಲು, ಕಬ್ಬಲಿ ರಾಮಚಂದ್ರ, ಅಬ್ದುಲ್ ಕಯೂಮ್, ಚಂದ್ರು, ಶೇಖರ್, ವಿಜಯ್ ಕುಮಾರ್, ಮಲ್ಲಿಗೆವಾಳು ದೇವಪ್ಪ ಮೊದಲಾದವರು ಉಪಸ್ಥಿತರಿದ್ದರು.--------------------------------------------------------------