ಸಾರಾಂಶ
ತುಮಕೂರಿನಲ್ಲಿ ಪ್ರಚಾರದ ವೇಳೆ ಎಚ್ .ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅವಹೇಳನ ಹೇಳಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಮಹಿಳೆಯರು , ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿರುವ ಎಚ್ .ಡಿ.ಕುಮಾರಸ್ವಾಮಿ ವಿರುದ್ಧ ‘ಗೋ ಬ್ಯಾಕ್’ ಪೋಸ್ಟರ್ ಹಿಡಿದು ಚಳವಳಿ ನಡೆಸಿದರು. ಜಿಲ್ಲೆಯಿಂದ ಎಚ್ .ಡಿ.ಕುಮಾರಸ್ವಾಮಿ ತೊಲಗಲಿ ಎಂದು ಧಿಕ್ಕಾರ ಕೂಗಿದರು.
ಬೆಂಗಳೂರು - ಮೈಸೂರು ಹೆದ್ದಾರಿಗೆ ಆಗಮಿಸಿ ಮಾನವ ಸರಳಿ ನಿರ್ಮಿಸಿ, ಎಚ್ .ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ಬಗ್ಗೆ ಎಚ್ಡಿಕೆ ಅಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಜಿಲ್ಲೆ ಬಿಟ್ಟು ತೆರಳಬೇಕು ಎಂದು ಆಗ್ರಹಿಸಿದರು.ತುಮಕೂರಿನಲ್ಲಿ ಪ್ರಚಾರದ ವೇಳೆ ಎಚ್ .ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ನೀಡಿದೆ. ಆದರೆ, ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲದೇ ಎಚ್ಡಿಕೆ ಲಘುವಾಗಿ ಮಾತನಾಡಿದ್ದಾರೆ. ಸ್ವಾಭಿಮಾನದ ಹೆಣ್ಣು ಮಕ್ಕಳು ಲೋಕಸಭಾ ಚುನಾವಣೆಯಲ್ಲಿ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ , ಕಾಂಗ್ರೆಸ್ ರಾಜ್ಯ ನಾಯಕಿ ಪುಷ್ಪ ಅಮರನಾಥ್ , ವಿಜಯಲಕ್ಷ್ಮೀ ರಘುನಂದನ್, ಪಲ್ಲವಿ ಸೇರಿ ಹಲವಾರು ಮಹಿಳೆಯರು ಭಾಗವಹಿಸಿದ್ದರು.