ಮಹಿಷಿ ವರದಿ ಜಾರಿಗೆ ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ

| Published : Jun 28 2024, 02:18 AM IST / Updated: Jun 28 2024, 09:01 AM IST

ಸಾರಾಂಶ

ಡಾ। ಸರೋಜಿನಿ ಮಹಿಷಿ ವರದಿಯ ಜಾರಿಗೊಳಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

 ಬೆಂಗಳೂರು : ಕನ್ನಡಿಗರಿಗೆ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ಒದಗಿಸುವ ಡಾ। ಸರೋಜಿನಿ ಮಹಿಷಿ ವರದಿಯ ಜಾರಿಗೊಳಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಎಂ.ಬಸವರಾಜ ಪಡುಕೋಟೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಎಂ.ಬಸವರಾಜ ಪಡುಕೋಟೆ, ಡಾ। ಸರೋಜಿನಿ ಮಹಿಷಿ ವರದಿಯನ್ನು ಈಗಾಗಲೇ ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಜಾರಿಗೊಳಿಸಿ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂದು ಕಾನೂನು ರೂಪಿಸಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಳೆದ 40 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಜಾರಿಗೊಳಿಸುವ ಪ್ರಯತ್ನವನ್ನು ಅಧಿಕಾರಕ್ಕೆ ಬಂದ ಸರ್ಕಾರಗಳು ಮಾಡುತ್ತಿಲ್ಲ ಎಂದು ದೂರಿದರು.

2016ರಲ್ಲಿ ಡಾ। ಪ್ರೊ.ಸಿದ್ದರಾಮಯ್ಯ ನೇತೃತ್ವದಲ್ಲಿ ಡಾ। ಸರೋಜಿನಿ ಮಹಿಷಿ ಪುನರ್ ಪರಿಶೀಲನಾ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗಿದೆ. ಡಾ। ಸರೋಜಿನಿ ಮಹಿಷಿ ಅವರ ಮೂಲ ವರದಿಯಲ್ಲಿ ಕೇವಲ ಸರ್ಕಾರ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾತ್ರ ಅಧ್ಯಯನ ನಡೆಸಲಾಗಿದೆ. ಆದರೆ, ಇದೀಗ ಜಾಗತೀಕರಣದ ಪರಿಣಾಮದಿಂದ ಐಟಿ-ಬಿಟಿ, ಬ್ಯಾಂಕಿಂಗ್‌ ಸೇರಿದಂತೆ ಮೊದಲಾದ ಕ್ಷೇತ್ರದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗಿವೆ. 

ಪುನರ್‌ ಪರಿಶೀಲನಾ ಸಮಿತಿಯು 14 ಅಂಶಗಳ ಪಟ್ಟಿ ಮಾಡಿ ಕಾಯ್ದೆ ರಚಿಸಲು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರವೂ ಡಾ। ಸರೋಜಿನಿ ಮಹಿಷಿ ವರದಿ ಜಾರಿಯಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ. ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಹಾವಳಿ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗವಕಾಶ ದೊರೆಯದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಗೆ ತೆರಳಿ ಮನವಿ ಸಲ್ಲಿಕೆ ಮಾಡಲಾಗಿದೆ. ಮುಂಗಾರು ಮತ್ತು ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದರು.