ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳು ಗುರುವಾರ ಭೆಟ್ಟಿ ನೀಡಿ ಸೋಮವಾರದಿಂದ ಸೇತುವೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳು ಗುರುವಾರ ಭೆಟ್ಟಿ ನೀಡಿ ಸೋಮವಾರದಿಂದ ಸೇತುವೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ಭೂ ಸ್ವಾಧೀನ ಹಾಗೂ ಗುತ್ತಿಗೆದಾರ ತಂಡ ಮಹಿಷವಾಡಗಿ ಸೇತುವೆ ವೀಕ್ಷಿಸಿ, ವಾಸ್ತವ ಸಮಸ್ಯೆಗಳಿಗೆ ಪರಿಹಾರ ಕಂಡು, ನಂತರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬಹುತೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿದರು.
ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುಶೀಲಮ್ಮ ಮಾತನಾಡಿ, ಸೇತುವೆ ಸಂಬಂಧಿತ ಗ್ರಾಮಗಳಾದ ಮಹಿಷವಾಡಗಿ ರೈತರ ಸಮಸ್ಯೆಯನ್ನು ಮೂರು ದಿನದೊಳಗೆ ಮದನಮಟ್ಟಿ ರೈತರ ಭೂಸ್ವಾಧೀನಕ್ಕೆ ಸಂಬಂಧಿತ ಕಾರ್ಯ ೧೫ ದಿನಗಳೊಳಗಾಗಿ ಪರಿಹರಿಸಿ ತಕ್ಷಣ ಪರಿಹಾರ ಹಣ ಪಾವತಿಸುವುದಾಗಿ ಹಾಗೂ ಸೋಮವಾರದಿಂದ ಸೇತುವೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.ಪ್ರವಾಹ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಸೇತುವೆಯ ಎರಡೂ ಬದಿಯ ರಸ್ತೆಯ ಎತ್ತರ ಹೆಚ್ಚಳ ಮಾಡಲು ಸಚಿವ ಸತೀಶ ಜಾರಕಿಹೊಳಿಯವರಿಗೆ ಮಾಹಿತಿ ನೀಡಿ ಪ್ರಸ್ತಾವನೆ ಸಲ್ಲಿಸಿ ಕಾಮಗಾರಿ ವಿಸ್ತರಿಸಲಾಗುವುದು. ಇಂದಿನಿಂದಲೇ ಅಧಿಕಾರಿಗಳು ಸ್ಥಳದಲ್ಲಿ ಉಳಿದು ಕೆಲಸ ಪ್ರಾರಂಭಿಸಲಾಗುವುದೆಂದು ತಿಳಿಸಿದರು. ಸಚಿವ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಆಗಮಿಸುವವರೆಗೂ ಸತ್ಯಾಗ್ರಹದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ. ಕಾಮಗಾರಿ ಆರಂಭಿಸುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಡಾ. ರವಿ ಜಮಖಂಡಿ ತಿಳಿಸಿದರು.
ಭೂಸ್ವಾಧೀನ ಅಧಿಕಾರಿ ನಾಗರಾಜ, ಪ್ರವೀಣ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರಶ್ರೀ, ವಿರಕ್ತಮಠದ ಸಿದ್ಧರಾಮಶ್ರೀಗಳ ನೇತೃತ್ವದಲ್ಲಿ ಸತ್ಯಾಗ್ರಹ ಸ್ಥಳದಲ್ಲಿ ಬಾಬಾಗೌಡ ಎಂ.ಪಾಟೀಲ, ಡಾ. ರವಿ ಜಮಖಂಡಿ, ಶಂಕರ ಸೊರಗಾಂವಿ, ಸತೀಶ ಹಜಾರೆ, ಧರೆಪ್ಪ ಉಳ್ಳಾಗಡ್ಡಿ, ಗಣಪತರಾವ್ ಹಜಾರೆ, ಮಹಾದೇವ ಧೂಪದಾಳ, ಸಂಜಯ ತೆಗ್ಗಿ, ಸೋಮಶೇಖರ ಕೊಟ್ರಶೆಟ್ಟಿ, ಭೀಮಶಿ ಪಾಟೀಲ, ಸಂಜಯ ತೇಲಿ, ಬಸವರಾಜ ಕುಂಚನೂರ, ಪ್ರಭಾಕರ ಢಪಳಾಪುರ, ಉದಯ ಜಿಗಜಿನ್ನಿ, ಗಜಾನನ ತೆಗ್ಗಿ, ಡಾ.ಪ್ರಭು ಪಾಟೀಲ, ಡಾ.ಸಂಗಮೇಶ ಹತಪಾಕಿ, ಡಾ.ಜಿ.ಎಚ್.ಚಿತ್ತರಗಿ, ರಾಜೇಂದ್ರ ಭದ್ರನ್ನವರ, ಭೀಮಶಿ ಮಗದುಮ್, ರಾಮಣ್ಣ ಹುಲಕುಂದ, ಸಿದ್ಧರಾಜ ಪೂಜಾರಿ, ಸಂಜೀವ ಜೋತಾವರ, ಬಸವರಾಜ ತೆಗ್ಗಿ, ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ಮುಖಂಡರು ಪಾಲ್ಗೊಂಡಿದ್ದರು.