ಸಾರಾಂಶ
ಹುಬ್ಬಳ್ಳಿ:
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದ್ದು, ಅಕ್ಷರಶಃ ಮಲೆನಾಡಿನ ವಾತಾವರಣ ಸೃಷ್ಟಿಸಿದೆ. ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿವರೆಗೂ ಮಳೆ ಸುರಿಯಿತು. ಹಲವು ಮನೆಗಳಿಗೆ ನೀರು ನುಗ್ಗಿದ್ದರೆ, ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಮೊಳಕಾಲ್ಮಟ ನೀರು ನಿಂತಿದ್ದು ಕಂಡು ಬಂತು. ಈ ನಡುವೆ ಬೆಣ್ಣಿಹಳ್ಳ-ತುಪರಿಹಳ್ಳಗಳು ಮೈದುಂಬಿ ಹರಿಯುತ್ತಿವೆ. ಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ ಎದುರಾಗಿದೆ.ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನರನ್ನು ಹೈರಾಣು ಮಾಡಿದೆ. ಮನೆಯಿಂದಲೇ ಹೊರಬಾರದಂತೆ ಮನೆಯಲ್ಲಿ ಕಟ್ಟಿಹಾಕುವಂತಾಗಿದೆ.
ಗುರುವಾರ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ರಜೆ ದಿನವಾಗಿದ್ದರಿಂದ ಜನರ ಓಡಾಟ ಅಷ್ಟಾಗಿ ಇರಲಿಲ್ಲ. ಮಾರುಕಟ್ಟೆಯಲ್ಲೂ ಜನದಟ್ಟಣೆ ಕಡಿಮೆ ಇದ್ದದ್ದು ಕಂಡು ಬಂತು. ರಸ್ತೆಗಳೆಲ್ಲ ನೀರಿನ ಹೊಂಡದಂತೆ ಗೋಚರಿಸುತ್ತಿದ್ದವು. ಕೆಲವೆಡೆಯಂತೂ ಅಕ್ಷರಶಃ ಕೆರೆಗಳಂತೆ ಭಾಸವಾಗುತ್ತಿತ್ತು. ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಸವಾರರು ಹೈರಾಣಾಗಿದ್ದರು.ಬುಧವಾರದಿಂದ ಗುರುವಾರ ಬೆಳಗಿನ ಜಾವದವರೆಗೆ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕಿನಾದ್ಯಂತ ಸರಾಸರಿ 8 ಮಿಮೀ ಮಳೆಯಾಗಿದೆ. ಛಬ್ಬಿ ಹೋಬಳಿ ಸುತ್ತಮುತ್ತ 14.8 ಮಿಮೀ ಮಳೆಯಾಗಿದ್ದರೆ, ಹುಬ್ಬಳ್ಳಿ ನಗರದಲ್ಲಿ 5.7 ಮಿಮೀ ಮಳೆ ಬಿದ್ದಿದೆ. ಶಿರಗುಪ್ಪಿ ಮತ್ತು ಸುತ್ತಮುತ್ತ 3 ಮಿಮೀ ಹಾಗೂ ಬ್ಯಾಹಟ್ಟಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ 8.6 ಮಿಮೀ ಮಳೆಯಾಗಿರುವ ಬಗ್ಗೆ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ತಹಸೀಲ್ದಾರ್‌ರಾದ ಕಲಗೌಡ ಪಾಟೀಲ, ಪ್ರಕಾಶ ನಾಶಿ ತಿಳಿಸಿದ್ದಾರೆ. ಮಳೆಯಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳು ಹಾನಿಗೀಡಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಕೆರೆಯಂತಾದ ಬಿಆರ್‌ಟಿಎಸ್:ನಿರಂತರ ಮಳೆಯಿಂದಾಗಿ ಇಲ್ಲಿನ ಶ್ರೀನಗರ ಕ್ರಾಸ್‌ನಲ್ಲಿ ಬಿಆರ್‌ಟಿಎಸ್ ಕಾರಿಡಾರ್ ಹಾಗೂ ಮಿಶ್ರಪಥಗಳೆರಡು ಕೆರೆಯಂತಾಗಿದ್ದವು. ಮೊಳಕಾಲ ವರೆಗೂ ನೀರು ನಿಂತಿತ್ತು. ಅಂತಹದ್ದರಲ್ಲೇ ಬೈಕ್ ಸೇರಿದಂತೆ ಎಲ್ಲ ವಾಹನಗಳು ಸಂಚರಿಸುತ್ತಿದ್ದವು. ಬಿಆರ್‌ಟಿಎಸ್ ಕಾರಿಡಾರ್ ನಿರ್ಮಾಣವಾದಾಗಿನಿಂದ ಇಲ್ಲಿ ಈ ಸಮಸ್ಯೆಯಿದೆ. ಇದನ್ನು ಬಗೆಹರಿಸಲು ಅಧಿಕಾರಿ ವರ್ಗ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಸುರಿವ ಮಳೆಯಲ್ಲೂ ಭಕ್ತರ ದಂಡು:ನಿರಂತರ ಸುರಿಯುವ ಮಳೆ ಮಧ್ಯೆಯೂ ಸವದತ್ತಿ ಯಲ್ಲಮ್ಮನಗುಡ್ಡ ಯಾತ್ರೆಗೆ ತೆರಳುವ ರೇಣುಕಾದೇವಿ ಭಕ್ತರ ಸಂಖ್ಯೆ ಗಣನೀಯವಾಗಿತ್ತು. ಯಲ್ಲಮ್ಮಗುಡ್ಡಕ್ಕೆ ತೆರಳುವ ಬಸ್ ನಿಲ್ದಾಣದಲ್ಲಿ ಭಕ್ತರ ದಂಡು ಕಂಡು ಬಂದಿತು. ನಗರದಿಂದ ಹೊರಡುತ್ತಿದ್ದ ವಿಶೇಷ ಬಸ್‌ಗಳು ಭರ್ತಿಯಾಗಿದ್ದವು. ಸೀಗೆ ಹುಣ್ಣಿಮೆ ಹಿನ್ನೆಲೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆಯುವುದು ಸಂಪ್ರದಾಯ. ಆದರೆ, ಮಳೆಯನ್ನು ಲೆಕ್ಕಿಸದೇ ಸಾವಿರಾರು ಭಕ್ತರು ತೆರಳುತ್ತಿದ್ದದ್ದು ವಿಶೇಷವಾಗಿತ್ತು.
ಈ ನಡುವೆ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳಿಗೆ ಮಳೆಯಿಂದಾಗಿ ನೀರಿನ ಒಳಹರಿವು ಹೆಚ್ಚಾಗಿದೆ. ಎರಡು ಹಳ್ಳಗಳಳು ಸೇರಿದಂತೆ ಉಪಹಳ್ಳಗಳೆಲ್ಲ ಮೈದುಂಬಿ ಹರಿಯುತ್ತಿವೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ನೀರು ನುಗ್ಗುವ ಆತಂಕವೂ ಎದುರಾಗಿದೆ. ನಿರಂತರ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಣ್ಣಿನ ಮನೆಗಳು ಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಜಾಗ್ರತೆಯಿಂದಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.