ಮೈಲಾರ ಬಸವಲಿಂಗ ಶರಣರು ತಮ್ಮ ತ್ರಿಪದಿಗಳ ಮೂಲಕ ಲಿಂಗಾಯತ ಧರ್ಮದ ಶ್ರೇಷ್ಠತೆಯನ್ನು ನಾಡಿಗೆ ಸಾರಿದ್ದಾರೆ.

ಹೂವಿನಹಡಗಲಿ: ಮೈಲಾರ ಬಸವಲಿಂಗ ಶರಣರು ತಮ್ಮ ತ್ರಿಪದಿಗಳ ಮೂಲಕ ಲಿಂಗಾಯತ ಧರ್ಮದ ಶ್ರೇಷ್ಠತೆಯನ್ನು ನಾಡಿಗೆ ಸಾರಿದ್ದಾರೆ. ಅವರ ವಚನಗಳ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಮೈಲಾರದ ಜಯಪ್ರಕಾಶ ನಾರಾಯಣ ಕಲಾ ಮಂದಿರದಲ್ಲಿ ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಆಯೋಜಿಸಿದ್ದ, ಕರ್ನಾಟಕ ರಾಜೋತ್ಸವ, ಕನ್ನಡ ನುಡಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಸಂಯಮ ಬಹಳ ಮುಖ್ಯವಾಗಿದ್ದು, ಶಿಸ್ತಿಗೆ ಒಳಪಡದಿದ್ದರೆ ನಾವು ಯಾವ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಅಸಾಧ್ಯ. ಮೈಲಾರ ಗ್ರಾಮದ ಸಂಘಟಕ ಪುಟ್ಟಪ್ಪ ತಂಬೂರಿಯವರು, ಗ್ರಾಮೀಣ ಜನರಲ್ಲಿ ನಾಡು, ನುಡಿಯ ಅಭಿಮಾನ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಟಿ.ಎಂ. ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಚ್.ಜಿ. ಪಾಟೀಲ, ಸಮಿತಿ ಅಧ್ಯಕ್ಷ ಪುಟ್ಟಪ್ಪ ತಂಬೂರಿ ಮಾತನಾಡಿದರು.

ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಹೋತನಹಳ್ಳಿ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿಗೆ ಮೈಲಾರ ಬಸವಲಿಂಗ ಶರಣಶ್ರೀ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರು, ಆದರ್ಶ ದಂಪತಿಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚನ್ನಬಸಯ್ಯಸ್ವಾಮಿ ಹಿರೇಮಠ, ಕೆ. ಚಿಕ್ಕಣ್ಣ, ಜೆ. ಆಶಾ ಚಳ್ಳಕೆರೆ, ಬಿ. ಫರೀದಾ ಖಾನ್, ಪುಟ್ಟರಾಜ, ಸುರೇಶ ಬೆಳಗೆರೆ, ಕೆ. ಪರಶುರಾಮ ಗೂರಪ್ಪನವರ, ಟಿ.ಎಲ್. ರಾಜೇಂದ್ರ, ದಯಾನಂದ, ಪ್ರಹ್ಲಾದ್, ಕೆ. ಶಂಕರಗೌಡ, ವಿನೋದಕುಮಾರ್, ಮಾರುತಿ, ಲೋಕನಾಥ, ಮಂಜುನಾಥ ಬಾರ್ಕಿ ಸೇರಿದಂತೆ ಇತರರಿದ್ದರು.

ಉಪನ್ಯಾಸಕಿ ಎಚ್.ಸಿ. ಇಂಚರ ಉಪನ್ಯಾಸ ನೀಡಿದರು. ಕಲಾವಿದರಾದ ವಸಂತಕುಮಾರ್ ಕಡತಿ, ಎಚ್.ಸಿ. ಶಂಕರ್ ಅವರ ಮಿಮಿಕ್ರಿ, ಶಿಗ್ಗಾವಿಯ ಎಸ್. ಅರುಂಧತಿ ಆರೇರ ನೃತ್ಯ ರೂಪಕ ಜನ ಮನ ಸೊರೆಗೊಂಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಡಿ, ಮೈಲಾರದ ನಿಂಗಪ್ಪ ಅಡಿವೆಪ್ಪನವರ ತಂಡದಿಂದ, ಸುಗಮ ಸಂಗೀತ, ಹ್ಯಾರಡ ಎನ್. ಮಂಜುನಾಥ ತಂಡದಿಂದ ಜಾನಪದ ಗೀತ ಗಾಯನ ನಡೆಯಿತು.