ಡಾ.ನಂಜುಂಡಪ್ಪ ವರದಿ ಅನ್ವಯ ಶಿಕ್ಷಣ, ಆರೋಗ್ಯ, ಕೃಷಿ, ಸಾಮಾಜಿಕ, ಆರ್ಥಿಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ, ತೀರಾ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹೊಂದಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಲ್ಲಿಗೆನಾಡು ಹೂವಿನಹಡಗಲಿ ಪ್ರತಿ ಬಾರಿ ಬಜೆಟ್‌ನಲ್ಲಿ ಅನ್ಯಾಯಕ್ಕೆ ಒಳಗಾಗುತ್ತಾ ಬಂದಿದ್ದು, ಈ ಬಾರಿ ಬಜೆಟ್‌ನಲ್ಲಿ ಮೈಲಾರ-ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಕ್ಕೆ, ಸಾಕಾರ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಡಾ.ನಂಜುಂಡಪ್ಪ ವರದಿ ಅನ್ವಯ ಶಿಕ್ಷಣ, ಆರೋಗ್ಯ, ಕೃಷಿ, ಸಾಮಾಜಿಕ, ಆರ್ಥಿಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ, ತೀರಾ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹೊಂದಿದೆ.

ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಯೆಂಬ ಹೆಗ್ಗಳಿಕೆ ಇರುವ ಮೈಲಾರಲಿಂಗೇಶ್ವರ ಜಾತ್ರೆಗೆ, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಅಭಿವೃದ್ಧಿ ಕಂಡಿಲ್ಲ. 2017ರ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮೈಲಾರ-ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ, ಅಂದು ₹5 ಕೋಟಿ ಮೀಸಲಿಟ್ಟರು. ಆದರೆ ಈ ಕುರಿತು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಸರ್ಕಾರ ಕಾನೂನು ಹೋರಾಟ ಮಾಡಿ, ಈ ಬಾರಿ ಬಜೆಟ್‌ನಲ್ಲಿ ಮತ್ತೆ ಮೈಲಾರ-ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನ್ನಣೆ ಸಿಗಬೇಕೆಂಬ ನಿರೀಕ್ಷೆಯಲ್ಲಿ ಭಕ್ತರಿದ್ದಾರೆ.

ತಾಲೂಕಿನ ಮಾಗಳ-ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ನೀರಾವರಿ ಬೋರ್ಡ್‌ಗೆ ₹35 ಕೋಟಿ ಅನುದಾನ ನೀಡುವಂತೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ನೀರಾವರಿ ನಿಗಮದ ಮೂಲಕ ಅಗತ್ಯ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ತಾಲೂಕಿನ ಕೊಯಿಲಾರಗಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ 336 ಎಕರೆ ಸರ್ಕಾರಿ ಭೂಮಿ ಇದೆ. ಇಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕೆಂಬ 15 ವರ್ಷಗಳ ಬೇಡಿಕೆ ಇದೆ. ಈ ಭಾಗದ ರೈತರ ಹೋರಾಟದ ಫಲವಾಗಿ ರಾಯಚೂರು ಕೃಷಿ ವಿವಿ ಕುಲ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಜಾಗವಿದೆ. ಪಕ್ಕದಲ್ಲೇ ತುಂಗಭದ್ರ ನದಿ ಹರಿಯುತ್ತಿದೆ. ಈ ಭಾಗದಲ್ಲಿ ಸ್ಥಾಪನೆ ಮಾಡಿದರೆ ರೈತರ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಆಸೆ ರೈತರದ್ದು. ಈ ಬಾರಿ ಬಜೆಟ್‌ನಲ್ಲಿ ಜನ ನಿರೀಕ್ಷೆ ಮಾಡುತ್ತಿದ್ದಾರೆ.

ತಾಲೂಕಿನ ಹುಲಿಗುಡ್ಡದ ಬಳಿ 100 ಎಕರೆ ಸರ್ಕಾರಿ ಭೂಮಿ ಈಗಾಗಲೇ, ಪೊಲೀಸ್‌ ತರಬೇತಿ ಶಾಲೆ ಸ್ಥಾಪನೆಗಾಗಿಯೇ ಮೀಸಲು ಇಡಲಾಗಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಎಂ.ಪಿ. ಪ್ರಕಾಶರು ಸಶಸ್ತ್ರ ಮೀಸಲು ಪೊಲೀಸ್‌ ತರಬೇತಿ ಕೇಂದ್ರ ಮಂಜೂರು ಮಾಡಿಸಿದ್ದರು. ಆದರೆ ಬದಲಾದ ರಾಜಕೀಯ ವ್ಯವಸ್ಥೆಯಿಂದ ಬಳ್ಳಾರಿಯ ಹಗರಿ ಬಳಿಗೆ ಸ್ಥಳಾಂತರವಾಗಿತ್ತು. ಅಲ್ಲಿಯೂ ಸೂಕ್ತ ಜಾಗ ಇಲ್ಲದೇ ಮತ್ತೆ ಹೂವಿನಹಡಗಲಿಗೆ ಬಂತು. ಈಗಾಗಲೇ ಪೊಲೀಸ್‌ ಇಲಾಖೆ ಈ ಕುರಿತು ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಅಗತ್ಯ ಅನುದಾನ ನೀಡಬೇಕೆಂಬ ಜನರ ಒತ್ತಾಸೆ ಈ ಬಾರಿ ಈಡೇರುವ ನಿರೀಕ್ಷೆಯಲ್ಲಿದ್ದಾರೆ.

ಈ ಭಾಗದಲ್ಲಿ ಸಾಕಷ್ಟು ರೈತರು ಭತ್ತ, ಕಬ್ಬು, ಈರುಳ್ಳಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಕುರಿತು ರೈತರಿಗೆ ಅನುಕೂಲವಾಗಲು ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ 15 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸೂಕ್ತ, ಜಾಗ ಮತ್ತು ನೀರು ಇದೆ ಈ ಹಿಂದೆ ರಾಯಚೂರು ಕೃಷಿ ವಿವಿ ಕುಲ ಸಚಿವರು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಾರಿ ಸರ್ಕಾರ ರೈತರ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಸಂಶೋಧನಾ ಕೇಂದ್ರ ಮಂಜೂರು ಮಾಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ.