ಕೊಠಡಿಗೆ ಬೀಗ ಜಡಿದ ಪರಿಣಾಮ ಹರಕೆ ತೀರಿಸಿದ ಮಹಿಳೆಯರು ಬಯಲಲ್ಲೇ ಸ್ನಾನ ಮಾಡಿ, ಬಟ್ಟೆ ಬದಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ!
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಇತಿಹಾಸಿಕ ಪ್ರಸಿದ್ಧ ಮೈಲಾರಲಿಂಗೇಶ್ವರ ದೇಗುಲ ಪಕ್ಕದ ಸ್ನಾನದ ಕೊಠಡಿಗೆ ಬೀಗ ಜಡಿದ ಪರಿಣಾಮ ಹರಕೆ ತೀರಿಸಿದ ಮಹಿಳೆಯರು ಬಯಲಲ್ಲೇ ಸ್ನಾನ ಮಾಡಿ, ಬಟ್ಟೆ ಬದಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ!ಸುತ್ತ ನಾಲ್ಕಾರು ಮಹಿಳೆಯರು ಸೀರೆಯನ್ನು ಮರೆ ಮಾಡಿ ಬಯಲಲ್ಲೇ ಸ್ನಾನ ಮಾಡುವ ಅಮಾನವೀಯ ದೃಶ್ಯಗಳು ಕಂಡು ಬರುತ್ತಿವೆ. ಇಷ್ಟಾದರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ.
ಹೌದು, ನಾಡಿನ ಕೋಟ್ಯಂತರ ಭಕ್ತರ ಆರಾಧ್ಯ ದೈವ ಮೈಲಾರಲಿಂಗೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕಿದ್ದ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ, ಸ್ನಾನದ ಕೊಠಡಿಯಲ್ಲಿ ಭಕ್ತರು ಸ್ನಾನದ ನೆಪದಲ್ಲಿ ಹೊಲಸು ಮಾಡುತ್ತಾರೆಂಬ ಕಾರಣ ಇಟ್ಟುಕೊಂಡು ಮಹಿಳೆಯರ ಹಾಗೂ ಪುರುಷರ ಪ್ರತ್ಯೇಕ ಸ್ನಾನದ ಕೊಠಡಿಗೆ ಬೀಗ ಹಾಕಿದ್ದಾರೆ.ದೇವರ ಮೇಲೆ ನಂಬಿಕೆ ಇಟ್ಟು ಮೈಲಾರಕ್ಕೆ ಬರುವ ಭಕ್ತರು ಹತ್ತಾರು ಹರಕೆಗಳನ್ನು ತೀರಿಸುತ್ತಾರೆ. ಇದರಲ್ಲಿ ದೀಡ್ ನಮುಸ್ಕಾರ ಹಾಕಿದ ಮಹಿಳೆಯರು ಮತ್ತು ಪುರುಷರು ಬಯಲಲ್ಲೇ ಸ್ನಾನ ಮಾಡುತ್ತಿರುವುದು ಕಂಡು ಬಂತು. ಮಹಿಳೆಯರಿಗೆ ಸ್ನಾನದ ನಂತರದಲ್ಲಿ ಬಟ್ಟೆ ಬದಲಾಯಿಸಲು ಬಿದಿರಿನ ತಟ್ಟಿಯಿಂದ ಮರೆ ಮಾಡಿಲ್ಲ. ಇದರಿಂದ ಮಹಿಳೆಯರು ಮುಜುಗರದಿಂದ ಸುತ್ತಲೂ 3-4 ಮಹಿಳೆಯರು ಬಟ್ಟೆ ಹಿಡಿದು ಮರೆ ಮಾಡಿಕೊಂಡು, ಬಟ್ಟೆ ಬದಲಾಯಿಸುತ್ತಿದ್ದರು.
ಅಖಂಡ ಬಳ್ಳಾರಿ ಜಿಲ್ಲೆಯಲ್ಲೇ ಮೈಲಾರಲಿಂಗೇಶ್ವರ ಅತಿ ಶ್ರೀಮಂತ ದೇವಸ್ಥಾನ. ಆದರೆ ಬರುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಹಿಂದಿನ ಮರ್ಮವೇನು? ಪ್ರತಿ ಜಾತ್ರೆಯಲ್ಲಿ ಭಕ್ತರಿಂದ ಆದಾಯ ನಿರೀಕ್ಷೆ ಮಾಡುತ್ತಾರೆಯೇ ಹೊರತು ಕನಿಷ್ಠ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಭಕ್ತರು ದೂರುತ್ತಾರೆ.ಮೈಲಾರಲಿಂಗೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮೈಲಾರ ಗ್ರಾಮಸ್ಥರು, ಮಹಿಳಾ ಭಕ್ತರಿಗೆ ಸ್ನಾನ ಮಾಡಿದ ಬಳಿಕ ಬಟ್ಟೆ ಬದಲಾವಣೆ ಮಾಡಿಕೊಳ್ಳಲು ಏನಾದರೊಂದು ಮರೆ ಮಾಡುವ ವ್ಯವಸ್ಥೆ ಮಾಡಬೇಕೆಂದು ಸಭೆಯಲ್ಲೇ ಒತ್ತಾಯಿಸಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತರೂ ಮೂವರು ಮಹಿಳಾ ಅಧಿಕಾರಿಗಳಿದ್ದರು. ಸಭೆಯಲ್ಲಿ ಠರಾವು ಮಾಡಿದ್ದರೂ ದೇವಸ್ಥಾನದ ಇಒ ಮಹಿಳೆಯರಿಗೆ ಸ್ನಾನ ಮಾಡುವ ಕೋಣೆಗಳ ಬೀಗ ತೆರವು ಮಾಡಿಲ್ಲ. ಇದರಿಂದ ಮಹಿಳೆಯರು, ಪುರುಷರು ಒಂದೇ ಜಾಗದಲ್ಲೇ ನಳದ ನೀರನ್ನು ಕೊಡಪಾನದಲ್ಲಿ ತುಂಬಿಕೊಂಡು ಸ್ನಾನ ಮಾಡುವ ಪರಿಸ್ಥಿತಿ ಇದೆ.
ಸ್ನಾನದ ನೆಪದಲ್ಲಿ ಭಕ್ತರು ಕೋಣೆಯಲ್ಲಿ ಶೌಚ, ಮೂತ್ರ ಸೇರಿದಂತೆ ಗಲೀಜು ಮಾಡುತ್ತಾರೆ. ಅದಕ್ಕೆ ಬೀಗ ಹಾಕಿದ್ದೇವೆ ಎಂದು ದೇಗುಲದ ಅಧಿಕಾರಿ ಹೇಳುತ್ತಾರೆ ಎಂದು ಭಕ್ತರು ಆರೋಪಿಸಿದರು.ವರ್ಷಕ್ಕೊಮ್ಮೆ ಮೈಲಾರಲಿಂಗೇಶ್ವರ ಜಾತ್ರೆಗೆ ಬಂದು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸುತ್ತೇವೆ. ದೇವಸ್ಥಾನದ ಸ್ನಾನದ ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಕೇಳಿದರೆ ಗಲೀಜು ಮಾಡುತ್ತಾರೆ. ಅದಕ್ಕೆ ಬೀಗ ಹಾಕಿದ್ದೇವೆ. ಅಲ್ಲೇ ನಳದ ನೀರನ್ನು ಸ್ನಾನ ಮಾಡಿ ಎಂದು ಹೇಳುತ್ತಾರೆ ಎನ್ನುತ್ತಾರೆ ಹಾವೇರಿ ಭಕ್ತೆ ಜಯಮ್ಮ.
ಸ್ನಾನ ಮಾಡಿದ ಮಹಿಳೆಯರಿಗೆ ಬಟ್ಟೆ ಬದಲಾವಣೆ ಮಾಡಿಕೊಳ್ಳಲು ನದಿ ತೀರದಲ್ಲಿ ವ್ಯವಸ್ಥೆ ಮಾಡಿದ್ದೇವೆ. ಆದರೆ ದೇವಸ್ಥಾನದ ಆವರಣದಲ್ಲಿ ವ್ಯವಸ್ಥೆ ಮಾಡಿಲ್ಲ. ಸ್ನಾನದ ಕೊಣೆಯಲ್ಲಿ ಭಕ್ತರು ಗಲೀಜು ಮಾಡುತ್ತಾರೆಂಬ ಕಾರಣಕ್ಕಾಗಿ ಬೀಗ ಹಾಕಿದ್ದೇವೆ ಎನ್ನುತ್ತಾರೆ ಮೈಲಾರಲಿಂಗೇಶ್ವರ ದೇವಸ್ಥಾನದ ಇಒ ಮಲ್ಲಪ್ಪ.