ಬಡವರಿಗೆ ಸೇವೆ ನೀಡುವುದೇ ಮುಖ್ಯ ಉದ್ದೇಶ: ಅಧ್ಯಕ್ಷ ಜಯದೇವ್‌

| Published : Jul 16 2024, 12:34 AM IST

ಬಡವರಿಗೆ ಸೇವೆ ನೀಡುವುದೇ ಮುಖ್ಯ ಉದ್ದೇಶ: ಅಧ್ಯಕ್ಷ ಜಯದೇವ್‌
Share this Article
  • FB
  • TW
  • Linkdin
  • Email

ಸಾರಾಂಶ

45 ವರ್ಷಗಳಿಂದ ನಿರಂತರವಾಗಿ ಸಮಾಜದ ಎಲ್ಲಾ ವರ್ಗಗಳಿಗೂ ಸಹಾಯ ಹಸ್ತ ನೀಡುವುದರ ಮೂಲಕ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಲಯನ್ಸ್ ಸಂಸ್ಥೆ ಇನ್ನೂ ಹೆಚ್ಚಿನ ಕಾರ್ಯ ಮಾಡಲಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಜಯದೇವ್ ತಿಳಿಸಿದರು. ಗುಬ್ಬಿಯಲ್ಲಿ ಸೋಮವಾರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

45 ವರ್ಷಗಳಿಂದ ನಿರಂತರವಾಗಿ ಸಮಾಜದ ಎಲ್ಲಾ ವರ್ಗಗಳಿಗೂ ಸಹಾಯ ಹಸ್ತ ನೀಡುವುದರ ಮೂಲಕ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಲಯನ್ಸ್ ಸಂಸ್ಥೆ ಇನ್ನೂ ಹೆಚ್ಚಿನ ಕಾರ್ಯ ಮಾಡಲಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಜಯದೇವ್ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ನಡೆದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಬಡವರಿಗೆ, ನಿರಾಶ್ರಿತರಿಗೆ, ಅಂಗವಿಕಲರಿಗೆ, ವಿದ್ಯಾರ್ಥಿಗಳ ಒಳಿತಿಗಾಗಿ ಸೇವೆ ಒದಗಿಸುವುದು ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಗ್ರಾಮಾಂತರ ಪ್ರದೇಶಗಳಿಗೆ ವೈದ್ಯಕೀಯ ಸೇವೆ ಒದಗಿಸುವ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ವೈದ್ಯಕೀಯ ಸೇವೆಯಿಂದ ಡಾ.ಮುರುಳಿಧರ್, ಡಾ.ಹರೀಶ್, ಮಾಧ್ಯಮ ಕ್ಷೇತ್ರದಿಂದ ಈ ಸಂಜೆ ಪತ್ರಿಕೆ ಗ್ರಾಮಾಂತರ ವರದಿಗಾರ ಬಸವರಾಜು ಸೇರಿದಂತೆ ನಿವೃತ್ತ ಸೈನಿಕರಿಗೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ರೇಣುಕುಮಾರ್, ನಿರ್ಗಮಿತ ಅಧ್ಯಕ್ಷ ರಮೇಶ್ ಬಾಬು, ಸಿದ್ದಪ್ಪ, ರಾಮಯ್ಯ, ಲೋಕೇಶ್, ಎನ್.ಮಂಜಯ್ಯ, ಜಿ.ಆರ್.ಶಿವಕುಮಾರ್. ಜಿ.ಬಿ.ಮಲ್ಲಪ್ಪ ಉಂಡೆ ರಾಮಯ್ಯ, ಕಾರ್ಯದರ್ಶಿ ವಿವೇಕಾನಂದಸ್ವಾಮಿ, ಖಜಾಂಚಿ ಕುಮಾರಸ್ವಾಮಿ ಮತ್ತಿತರರಿದ್ದರು.