ಶುಕ್ರವಾರ ಬ್ಯಾಡಗಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಮುಖ್ಯಾಧಿಕಾರಿ ವಿನಾಯಕುಮಾರ ಹೊಳೆಪ್ಪಗೋಳ ಅವರಿಂದ ಅಗಲೀಕರಣ ಭೂ ಸ್ವಾಧೀನ ಪರಿಹಾರದ ಮೊತ್ತವನ್ನು ಮುಖ್ಯರಸ್ತೆ ವರ್ತಕ ಸುರೇಶ ಮೇಲಗಿರಿ ಪಡೆದರು.
ಬ್ಯಾಡಗಿ: ಪಟ್ಟಣದ ಅಭಿವೃದ್ಧಿಗೆ ಮುಖ್ಯರಸ್ತೆ ಅಗಲೀಕರಣ ಅತ್ಯವಶ್ಯ. ಆದ್ದರಿಂದ ನನ್ನಂತೆ ಮುಖ್ಯರಸ್ತೆಯಲ್ಲಿನ ಉಳಿದ ವರ್ತಕರು ಹಠ ಬಿಟ್ಟು ಸ್ವಯಂಪ್ರೇರಿತರಾಗಿ ಬಂದು ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತವನ್ನು ಪಡದುಕೊಂಡು ಅಗಲೀಕರಣಕ್ಕೆ ಸಹಕಾರ ನೀಡುವಂತೆ ಮುಖ್ಯರಸ್ತೆ ವರ್ತಕ ಸುರೇಶ ಮೇಲಗಿರಿ ಮನವಿ ಮಾಡಿದರು.
ಶುಕ್ರವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಮುಖ್ಯಾಧಿಕಾರಿ ವಿನಾಯಕುಮಾರ ಹೊಳೆಪ್ಪಗೋಳ ಅವರಿಂದ ಅಗಲೀಕರಣ ಭೂ ಸ್ವಾಧೀನ ಪರಿಹಾರದ ಮೊತ್ತವನ್ನು ಖುದ್ದಾಗಿ ಪಡೆದುಕೊಂಡು ಆನಂತರ ಅವರು ಮಾತನಾಡಿದರು.ಅಭಿವೃದ್ಧಿ ಪರವಾಗಿರುವೆ: ನಾನು ಯಾವತ್ತು ಅಭಿವೃದ್ಧಿ ಪರವಾಗಿದ್ದೇನೆ. ಆದರೆ ನಮ್ಮ ಆಸ್ತಿ ಉಳಿಸಿಕೊಳ್ಳಲು ಇಷ್ಟು ದಿನ ಹೋರಾಟ ಮಾಡಿದ್ದು ನಿಜ. ಗುರುವಾರ ಪಟ್ಟಣದ ಪ್ರವಾಸಿ ಮಂದಿರಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಬಾಲಚಂದ್ರಗೌಡ ಪಾಟೀಲ, ಬಸವರಾಜ ಛತ್ರದ, ವಿ.ವಿ. ಹಿರೇಮಠ, ಗಂಗಣ್ಣ ಎಲಿ ಸೇರಿದಂತೆ ಹಲವು ಗಣ್ಯರು ಹೇಳಿದ ಮಾತಿಗೆ ಬೆಲೆ ಕೊಟ್ಟು ಪರಿಹಾರದ ಮೊತ್ತ ಪಡೆದುಕೊಂಡಿದ್ದೇವೆ ಎಂದರು.
ಹಠ ಬಿಟ್ಟು ಪರಿಹಾರ ಪಡೆದುಕೊಳ್ಳಿ: ಚೆಕ್ ವಿತರಣೆ ಮಾಡಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಅಗಲೀಕರಣಕ್ಕೆ ಮುಖ್ಯರಸ್ತೆಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಈಗಾಗಲೇ ನೂರಕ್ಕೂ ಹೆಚ್ಚು ಜನರು ಪರಿಹಾರದ ಮೊತ್ತ ಪಡೆದುಕೊಂಡು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಇದೀಗ ವರ್ತಕ ಸುರೇಶ ಮೇಲಗಿರಿ ಅವರು ಸಹ ತಮ್ಮ ಹಠ ಬಿಟ್ಟು ಪರಿಹಾರ ಮೊತ್ತ ಪಡೆದುಕೊಂಡು ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಅವರಂತೆ ಉಳಿದವರು ಸಹ ಬಂದು ಪರಿಹಾರ ಮೊತ್ತ ಪಡೆದುಕೊಂಡಲ್ಲಿ ಅಗಲೀಕರಣ ಸುಲಭವಾಗಲಿದೆ ಎಂದರು.ಎಲ್ಲರೂ ಸಹಕಾರ ನೀಡಲಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಅಗಲೀಕರಣ ಕಾನೂನುಬದ್ಧವಾಗಿ ನಡೆಯಲಿ ಎಂದು ಶಾಸಕರು ಹಾಗೂ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿದ್ದಾರೆ. ಅಗಲೀಕರಣ ಆಗಲೇಬೇಕು ಎನ್ನುವ ಹೋರಾಟಗಾರರು ಹಾಗೂ ನಮ್ಮ ಅಚಲ ನಿರ್ಧಾರ ಯಾರ ವಿರುದ್ಧ ಅಲ್ಲ ಎಂಬುದನ್ನು ಎಲ್ಲರೂ ಅರಿಯಲಿ. ಬದಲಾಗಿ ಪಟ್ಟಣದ ಅಭಿವೃದ್ಧಿಗೆ ನಾವೆಲ್ಲರೂ ಕೊಡುವ ಕೊಡುಗೆ ಅಂದುಕೊಂಡಾಗ ಹಠ ಹಾಗೂ ಅಹಂ ಸ್ವಯಂ ಮಾಯವಾಗಲಿದೆ. ಆದ್ದರಿಂದ ಉಳಿದವರು ಕೂಡಲೇ ಬಂದು ಪರಿಹಾರ ಪಡೆದುಕೊಂಡು ಅಗಲೀಕರಣಕ್ಕೆ ಸಹಕಾರ ನೀಡಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಬ್ಯಾಡಗಿ ಅಭಿವೃದ್ಧಿಗೆ ಸುರೇಶ ಮೇಲಗಿರಿ ಅವರು ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದರು. ಈರಣ್ಣ ಹಂಚಿನ, ಮಾರುತಿ ಮೇಲಗಿರಿ, ಶಿವಯೋಗಿ ಶಿರೂರ, ಗಣೇಶ ಅಚಲಕರ ಉಪಸ್ಥಿತರಿದ್ದರು.