ಸಾರಾಂಶ
ನಿರಂತರ ಅಧ್ಯಯನ,ಪ್ರಾಮಾಣಿಕತೆ ಮತ್ತು ಕಕ್ಷಿದಾರರೊಂದಿಗೆ ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಕ್ಷಮತೆ ಇದ್ದರೆ ವಕೀಲಿ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ;ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ
ಜಿಲ್ಲಾ ವಕೀಲರ ವೆಲ್‌ಫೇರ್ ಫಂಡ್ ಟ್ರಸ್ಟ್ ಉದ್ಘಾಟನೆಯಲ್ಲಿ ನ್ಯಾ. ರಾಮಚಂದ್ರ
ಧಾರವಾಡ: ಯಾವುದೇ ವೃತ್ತಿಯ ಯಶಸ್ಸು, ಅದರಲ್ಲಿ ತೊಡಗಿಕೊಂಡಿರುವವರ ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೈಕೋರ್ಟ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಹೇಳಿದರು.ವಕೀಲರ ಸಂಘದ ಸಭಾಭವನದಲ್ಲಿ ನಡೆದ ಜಿಲ್ಲಾ ವಕೀಲರ ವೆಲ್‌ಫೇರ್ ಫಂಡ್ ಟ್ರಸ್ಟ್ ಉದ್ಘಾಟನೆ ನೆರವೇರಿಸಿದ ಅವರು, ಇಂದಿಗೂ ಕೂಡಾ ವಕೀಲಿ ವೃತ್ತಿ ಅತ್ಯಂತ ಗೌರವಯುತ ವೃತ್ತಿ ಎಂದೇ ಪರಿಗಣಿತವಾಗಿದೆ. ಜನರು ಇಂದಿಗೂ ಕೂಡಾ ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ಅಂಥ ವೃತ್ತಿಯ ಘನತೆ ಉಳಿಸಿ, ಬೆಳೆಸುವುದು ನ್ಯಾಯಾಂಗದ ಭಾಗವಾಗಿರುವ ವಕೀಲರು ಮತ್ತು ನ್ಯಾಯಾಧೀಶರ ಜವಾಬ್ದಾರಿ ಎಂದರು.
ನಿರಂತರ ಅಧ್ಯಯನ,ಪ್ರಾಮಾಣಿಕತೆ ಮತ್ತು ಕಕ್ಷಿದಾರರೊಂದಿಗೆ ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಕ್ಷಮತೆ ಇದ್ದರೆ ವಕೀಲಿ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ.ವಿಶೇಷವಾಗಿ ಕಿರಿಯ ವಕೀಲರು ಆರಂಭಿಕ ತೊಂದರೆ ಎದುರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಸಂಕಷ್ಟದಲ್ಲಿರುವ ವಕೀಲರ ಹಿತದೃಷ್ಟಿಯಿಂದ ಆರಂಭಿಸಲಾಗಿರುವ ವೆಲ್‌ಫೇರ್ ಫಂಡ್ ಟ್ರಸ್ಟ್ ಒಂದು ಉತ್ತಮ ನಡೆ.ಪ್ರತಿಯೊಬ್ಬ ವಕೀಲರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಹೇಳಿದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ವಿ.ಡಿ. ಕಾಮರೆಡ್ಡಿ, ಆನಂದ ಮಗುದುಮ್, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್. ಪೊಲೀಸಪಾಟೀಲ, ಎನ್.ಆರ್. ಮಟ್ಟಿ,ಸದಾನಂದ ಮುಂದಿನಮನಿ, ಆರ್.ಎಫ್. ಚಿನ್ನಣ್ಣವರ. ಎ.ಎ. ದೊಡ್ಡಮನಿ ಸೇರಿದಂತೆ ಅನೇಕ ಹಿರಿಯ ವಕೀಲರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ವಕೀಲರ ದೂರವಾಣಿ ಡೈರಿ ಬಿಡುಗಡೆಗೊಳಿಸಿದರು.