ಯಲಬುರ್ಗಾ: ಅಡುಗೆದಾರರು ಬಿಸಿಯೂಟ ತಯಾರಿಸುವಾಗ ಶುಚಿತ್ವ ಕಾಪಾಡಬೇಕು ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಆವರಣದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ತಯಾರಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ಮಕ್ಕಳ ಬಿಸಿಯೂಟಕ್ಕಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಎಲ್ಲ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿ ಇಲಾಖೆ ನಿಯಮ ಪಾಲಿಸಬೇಕು. ಅಡುಗೆ ಕೊಠಡಿ ಸ್ವಚ್ಛತೆ, ಮಕ್ಕಳ ಆಹಾರ ತಯಾರಿಕೆಯಲ್ಲಿ ಯಾವುದೇ ಲೋಪವಾಗಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಅಗ್ನಿಶಾಮಕ ಸಿಬ್ಬಂದಿಗಳಿಂದ ಸ್ವಚ್ಛತೆ, ಸುರಕ್ಷತೆ, ಆರೋಗ್ಯ, ಗ್ಯಾಸ್ ಸ್ಟೋವ್ ಬಳಕೆ, ಅಗ್ನಿ ನಂದಕ ಬಳಕೆ ಇತ್ಯಾದಿ ಮುಂಜಾಗ್ರತಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ. ದಾನಿ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಅಡುಗೆ ತಯಾರಕರಿಗೆ ತರಬೇತಿ ನೀಡುತ್ತಿದ್ದು, ಕಡ್ಡಾಯವಾಗಿ ಇಲ್ಲಿ ತಿಳಿಸುವ ನಿಯಮ ಅರ್ಥೈಸಿಕೊಳ್ಳಬೇಕು ಎಂದರು.
ಈ ಸಂದರ್ಭ ಮುಖ್ಯಶಿಕ್ಷಕ ದುರುಗಪ್ಪ ತುಮ್ಮರಗುದ್ದಿ, ಅಡುಗೆದಾರರ ಸಂಘದ ಅಧ್ಯಕ್ಷೆ ಜಯಶ್ರೀ ತೋಟದಮುನಿ, ಪದ್ಮಾವತಿ, ಸಿಐಟಿಯು ಶಿವನಗೌಡ, ಅಬ್ದುಲ್ ರಜಾಕ್, ಬಸವರಾಜ ಇದ್ದರು.