ನಮ್ಮ ದೇಶದಲ್ಲಿ ಹೆಚ್ಚು ಹೃದಯರೋಗ, ಮಧುಮೇಹ ರೋಗ ಕಂಡು ಬರುತ್ತಿದೆ. ಇಂದು ಮಕ್ಕಳಲ್ಲಿಯೂ ಸಕ್ಕರೆ ಕಾಯಿಲೆ ಬರುತ್ತಿದೆ. ಇದನ್ನು ಗಮನಿಸಿ ಮಕ್ಕಳಿಗೆ ಉತ್ತಮ ಆಹಾರ ನೀಡಿ ಅವರನ್ನು ಮುಂದೆ ರೋಗ ಬರದಂತೆ ಜಾಗೃತಿ ವಹಿಸಬೇಕು.

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರತಿಯೊಬ್ಬರೂ ಒತ್ತಡ ಮುಕ್ತರಾಗಿ ನಿತ್ಯ ವ್ಯಾಯಾಮ, ಮಿತ ಆಹಾರದ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಿಡಿತ ಆಸ್ಪತ್ರೆಯ ಹೆಸರಾಂತ ಹೃದಯ ತಜ್ಞ ಡಾ. ಎಚ್.ಎನ್. ಬಾನುಪ್ರಕಾಶ್‌ ಕರೆ ನೀಡಿದರು.

ನಗರದಲ್ಲಿ ಯೂನಿವರ್ಸಲ್ ಬ್ಯೂಸಿನೆಸ್ ಫೋರಂ ವತಿಯಿಂದ ಏರ್ಪಡಿಸಿದ್ಧ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹೃದಯರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ವಿಷಯ ಕುರಿತು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ಮೊದಲು ಒತ್ತಡದಿಂದ ಮುಕ್ತರಾಗಬೇಕು ಎಂದು ತಿಳಿಸಿದರು.

ಪ್ರತಿ ನಿತ್ಯವೂ ಜೀವನದಲ್ಲಿ ಜಂಜಾಟ ಇದ್ದೇ ಇರುತ್ತದೆ. ಇದರ ನಡುವೆ ನಮ್ಮಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಲು ನಾವು ತಿನ್ನುವ ಆಹಾರಕ್ಕೆ ಅನುಗುಣವಾಗಿ ತಪ್ಪದೇ ದಿತ್ಯವೂ ವ್ಯಾಯಾಮ ಮಾಡಲೇಬೇಕು. ಇದರಲ್ಲಿ ನಡುಗೆ ಅವಶ್ಯವಾಗಿದೆ. ಕನಿಷ್ಠ ನಲವತ್ತೈದು ನಿಮಿಷವಾದರೂ ವಾಕಿಂಗ್ ಮಾಡಲೇ ಬೇಕು ಎಂದು ತಿಳಿಸಿದರು.

ಇಂದು ನಾವು ಪೌಷ್ಠಿಕ ಆಹಾರವನ್ನು ತಿನ್ನುತ್ತಿಲ್ಲ. ನಾವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ಹೆಚ್ಚು ಏಕದಳ ಧಾನ್ಯ ಅಕ್ಕಿ, ರಾಗಿ, ಗೋಧಿಯನ್ನೇ ಹೆಚ್ಚು ತಿನ್ನುತ್ತೇವೆ. ದ್ವಿದಳ ಧಾನ್ಯಗಳನ್ನು ನಾವು ಕಡಿಮೆ ಬಳಸುತ್ತಿದ್ದೇವೆ. ಆಹಾರದಲ್ಲಿ ಹೆಚ್ಚು ದ್ವಿದಳ ಧಾನ್ಯಗಳಾದ ಕಾಳುಗಳನ್ನು ಬಳಸಬೇಕು, ಹೆಚ್ಚು ನಾರಿನ ಅಂಶ ಇರುವ ಸೊಪ್ಪು, ತರಕಾರಿ, ತುಪ್ಪ, ಮೊಸರು, ಮೊಟ್ಟೆ ಸೇವಿಸಬೇಕು ಎಂದು ಸಲಹೆ ನೀಡಿದರು.

ಮಿತ ಆಹಾರ, ಯೋಗ, ಧ್ಯಾನ ಮಾಡವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದ ಅವರು ರೋಗ ಬಂದಾಗ ವೈದ್ಯರನ್ನು ಸಂಪರ್ಕ ಮಾಡುತ್ತಾರೆ, ರೋಗ ಬರದಂತೆ ಜಾಗೃತಿ ವಹಿಸುವುದೇ ಬಹಳ ಮುಖ್ಯ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಹೆಚ್ಚು ಹೃದಯರೋಗ, ಮಧುಮೇಹ ರೋಗ ಕಂಡು ಬರುತ್ತಿದೆ. ಇಂದು ಮಕ್ಕಳಲ್ಲಿಯೂ ಸಕ್ಕರೆ ಕಾಯಿಲೆ ಬರುತ್ತಿದೆ. ಇದನ್ನು ಗಮನಿಸಿ ಮಕ್ಕಳಿಗೆ ಉತ್ತಮ ಆಹಾರ ನೀಡಿ ಅವರನ್ನು ಮುಂದೆ ರೋಗ ಬರದಂತೆ ಜಾಗೃತಿ ವಹಿಸಬೇಕು ಎಂದು ಡಾ.ಬಾನುಪ್ರಕಾಶ್‌ ತಿಳಿಸಿದರು

ಚರ್ಮರೋಗ ತಜ್ಞರಾದ ಡಾ.ಜೆ.ಬಿ. ಸುಷ್ಮಾ ಮಾತನಾಡಿ ಇಂದು ಅನೇಕ ಕಾಯಿಲೆಗಳು ಚರ್ಮದಲ್ಲಿ ಕಾಣುವ ರೋಗದಿಂದ ವ್ಯಕ್ತವಾಗುತ್ತವೆ. ನಮಗೆ ಯಾವುದೇ ಕಾಯಿಲೆ ಇಲ್ಲ ಎನ್ನುವಂತೆಯೇ ಇರುತ್ತೇವೆ. ಆದರೆ ಒಳಗಡೆ ಅದು ತನ್ನ ಪ್ರಭಾವ ಬೆಳೆಸುತ್ತಿರುತ್ತದೆ. ತಮ್ಮ ಚರ್ಮದ ಮೇಲೆ ಗೋಚರ ವಾಗುತ್ತದೆ. ಕತ್ತಿನ ಸುತ್ತ ಕಪ್ಪುಕಂಡು ಬರುತ್ತಿದೆ ಎಂದರೆ ತಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯು.ಬಿ.ಎಫ್‌ ಅಧ್ಯಕ್ಷ ಎನ್.ಮಹಂತೇಶ್ ಮಾತನಾಡಿ ಇಂದು ದಿನವೂ ಪ್ರತಿಯೊಬ್ಬರಿಗೂ ಒತ್ತಡ ಇರುತ್ತದೆ. ಈ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.

ಯು.ಬಿ.ಎಫ್‌ ಉಪಾಧ್ಯಕ್ಷ ಜ್ಞಾನೇಂದ್ರ ಪ್ರಸಾದ್ ದೀಪು, ಕೋಶಾಧ್ಯಕ್ಷ ನಾಗಭೂಷಣ್, ಚಿ.ನಿ.ಪುರುಷೋತ್ತಮ್, ದಂತ ವೈದ್ಯ ಡಾ.ಸಂಜಯ್ ನಾಯಕ್, ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲ್ತೆ, ಯು.ಬಿ.ಎಫ್ ನ ಸದಸ್ಯರಾದ ಗೋಪಿನಾಥ್, ಕಿರಣ್‌ ರಾಜಶೇಖರಯ್ಯ, ಕಾಂತರಾಜ್, ಕೃಷ್ಣ, ವಿಕಾಸ್, ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.