ಸಾರಾಂಶ
ತುರ್ವಿಹಾಳ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಯುಗಾದಿ-ರಂಜಾನ್ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಪಿಎಸ್ಐ ನಾಗರಾಜ ಕೊಟಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ತುರ್ವಿಹಾಳ
ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಂಡು ಸಹಬಾಳ್ವೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬಗಳನ್ನು ಆಚರಿಸಬೇಕು ಜೊತೆಗೆ ಕಾನೂನನ್ನು ಪಾಲಿಸಬೇಕು ಎಂದು ಪಿಎಸ್ಐ ನಾಗರಾಜ ಕೊಟಗಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಎಲ್ಲಾ ಸಮಾಜದ ಮುಖಂಡರು ನೋಡಿಕೊಂಡು ಅರ್ಥ ಪೂರ್ಣವಾಗಿ ಆಚರಿಸ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಹಿಂದೂ - ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದದತೆಯಿಂದ ಆಚರಿಸಬೇಕು ಎಂದು ಹೇಳಿದರು.
ನಂತರ ಪಪಂ ಸದಸ್ಯ ಬಾಪುಗೌಡ ದೇವರಮನಿ ಮಾತನಾಡಿ, ನೀರಿನ ಕೊರತೆಯಿಂದಾಗಿ ಯುಗಾದಿ ಹಬ್ಬದಲ್ಲಿ ನಡೆಯುವ ಬಣ್ಣದಾಟ ಮತ್ತು ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸದೆ ಸರಳವಾಗಿ ಆಚರಿಸಿ ಮುಸ್ಲಿಂ ಬಾಂಧವರ ದೊಡ್ಡ ಹಬ್ಬವಾದ ರಂಜಾನ್ ಹಬ್ಬ ಇದ್ದ ಕಾರಣ ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ನೀಡದೆ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಹಿಂದು ಮುಸ್ಲಿಮರು ಸೌಹಾರ್ದದತೆಯಿಂದ ಆಚರಿಸೋಣ ಎಂದರು.ಈ ಸಭೆಯಲ್ಲಿ ಪಿಎಸ್ಐ ಶಾಮಲಾಲ್, ಉಮರಸಾಬ್ ಅರಬ್, ಶರಣಬಸವ ಗಡೇದ,ಮಲ್ಲಪ್ಪ ಕಾನಿಹಾಳ,ಭೀಮದಾಸ ದಾಸರ, ಹನುಮಂತ ನಾಯಕ, ಎಹ್.ರಡ್ಡಿ, ಅರವಿಂದ ರಡ್ಡಿ,ಯೂನುಸ್ ಖಾಜಿ, ಅಮರೇಶ ನಾಗರಬೆಂಚಿ, ನವಾಬ್, ಮಹೆಬೂಬ್ ಹಾಗೂ ಇತರರು ಭಾಗವಹಿಸಿದ್ದರು.