ವಿವಿಧ ವಸತಿ ನಿಲಯ ನಿರ್ಮಾಣಕ್ಕೆ ಶಾಸಕ ಪಪ್ಪಿ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 16 ಕೋಟಿ ರು. ವೆಚ್ಚದಲ್ಲಿ ಮೂರು ವಸತಿ ನಿಲಯಗಳ ನಿರ್ಮಾಣಕ್ಕೆ ಮಂಗಳವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯ ಸೇರಿದಂತೆ ಶಿಕ್ಷಣ ಪಡೆಯುವ ಎಲ್ಲಾ ಮಕ್ಕಳ ಅನುಕೂಲಕ್ಕೆ ಸರ್ಕಾರ ಬದ್ಧವಾಗಿದೆ. ವಸತಿ ನಿಲಯಗಳ ನಿರ್ಮಾಣ ಮಾಡುವಾಗ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಸತಿ ನಿಲಯಗಳನ್ನು ಮೂರು ಕಡೆ ನಿರ್ಮಾಣ ಮಾಡಲು ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ನೀಡಿದೆ. ಈ ಕಾಮಗಾರಿಯನ್ನು ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರ್ಮಾಣ ಮಾಡಲಾಗುವುದು.ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಮೀಪದಲ್ಲಿ ಇರುವ ಬಾಬು ಜಗಜೀವನ ರಾಮ್ ಕಟ್ಟಡಕ್ಕೆ ಭೇಟಿ ನೀಡಿದ ಶಾಸಕರು, ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ವೀಕ್ಷಿಸಿದರು. 2013ರಿಂದಲೂ ಕಾಮಗಾರಿ ನಡೆಯುತ್ತಿದೆ. ಆದರೂ ಇನ್ನೂ ಪೂರ್ಣಗೊಂಡಿಲ್ಲದಿರುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಆದಷ್ಟು ಬೇಗ ಈ ಕಟ್ಟಡದ ಕಾಮಗಾರಿ ಮುಗಿಸಿ ಬಳಕೆ ಮಾಡಲು ಅವಕಾಶ ಮಾಡಿಕೊಡಬೇಕು. ಹೆಚ್ಚುವರಿ ಅನುದಾನಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ನಗರ ಸಭೆ ಆಯುಕ್ತೆ ಲಕ್ಷ್ಮೀ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್, ಗುತ್ತಿಗೆದಾರ ರಾಮಿರೆಡ್ಡಿ, ವಸತಿ ಸಂಸ್ಥೆಯ ಎಂಜಿನಿಯರ್ ಪ್ರಕಾಶ್, ಪವನ್, ವಿನಯ್ ಮಧರೆ, ಮುಂತಾದವರು ಇದ್ದರು.