ಪರಿಸರ ಸಮತೋಲನ ಕಾಯ್ದುಕೊಳ್ಳುವದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
ಮುಂಡರಗಿ: ಪರಿಸರ ಸಮತೋಲನ ಕಾಯ್ದುಕೊಳ್ಳುವದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದ್ದು ವಿಶೇಷವಾಗಿ ಯುವಕರು, ಶಾಲಾ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು ಎಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
ತಾಲೂಕಿನ ಕದಾಂಪೂರ ಗ್ರಾಮದ ಬಸಪ್ಪ ಮಲ್ಲಪ್ಪ ಹೊಸೂರ ಸರಕಾರಿ ಪ್ರೌಡ ಶಾಲೆಯಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಯುನಿಕ್ ಚಾರಿಟೇಬರ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಇಕೋ ಕ್ಲಬ್ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಂತಹ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ. ಸಿ.ಎಂ. ರಫೀ ಮಾತನಾಡಿ, ಯಾವುದೇ ಬೆಳೆಗಳು ಪರಿಪೂರ್ಣತೆಯಿಂದ ಬೆಳೆಯಬೇಕಾದರೆ ಉತ್ತಮ ಗುಣಮಟ್ಟದ ಫಸಲನ್ನು ಪಡೆಯಲು ಸಾವಯವ ಕೃಷಿ ಅತ್ಯಂತ ಮುಖ್ಯವಾಗಿದೆ. ಕಸದಿಂದ ರಸವೂ ಸಹಿತ ಸಾವಯವ ಕೃಷಿಯಲ್ಲಿ ಎದ್ದು ಕಾಣುತ್ತದೆ. ರೈತನ ಮಿತ್ರ ಎರಹುಳು ರೈತನಿಗೆ ಎಷ್ಟೊಂದು ಸಹಾಯಕಾರಿ ಆಗಿದೆ ಎಂಬುದನ್ನು ಉದಾಹರಣೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.ನಿವೃತ್ತ ಉಪನ್ಯಾಸಕ ಆರ್.ಎಫ್. ಲೋಟಗೇರಿ ಮಾತನಾಡಿದರು. ಹಿರಿಯ ಶಿಕ್ಷಕಿ ಸಂಗೀತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಯುನಿಕ್ ಚಾರಿಟೇಬರ್ ಟ್ರಸ್ಟ್‌ನಿಂದ ಶಾಲಾ ಉದ್ಯಾನವನಕ್ಕಾಗಿ ಹಾಗೂ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಬಳಗ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳಿದ್ದರು. ಬಿ.ಡಿ.ಅರ್ಜನಾಳ ನಿರೂಪಿಸಿ ವಂದಿಸಿದರು.