ಎಲ್ಲ ಸಮುದಾಯಗಳ ಜನರು ಪರಸ್ಪರ ಗೌರವದಿಂದ ನಡೆದುಕೊಳ್ಳುವ ಮೂಲಕ ಶಾಂತಿ, ಸೌಹಾರ್ದತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಇತರ ಧರ್ಮಗಳ ನಂಬಿಕೆ, ಮೌಲ್ಯ ಹಾಗೂ ಆಚರಣೆಗಳನ್ನು ಅರ್ಥಮಾಡಿಕೊಂಡು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತೀಯ ಸಂವಿಧಾನವೇ ಎಲ್ಲರಿಗೂ ಶ್ರೇಷ್ಠ ಮಾರ್ಗದರ್ಶಿಯಾಗಿದ್ದು, ‘ಸಂವಿಧಾನವೇ ನಮ್ಮ ಧರ್ಮ’ ಎಂಬ ಆಶಯದೊಂದಿಗೆ ನಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಜಾವೀದ್ ಇನಾಮದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ಎಲ್ಲ ಸಮುದಾಯಗಳ ಜನರು ಪರಸ್ಪರ ಗೌರವದಿಂದ ನಡೆದುಕೊಳ್ಳುವ ಮೂಲಕ ಶಾಂತಿ, ಸೌಹಾರ್ದತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಇತರ ಧರ್ಮಗಳ ನಂಬಿಕೆ, ಮೌಲ್ಯ ಹಾಗೂ ಆಚರಣೆಗಳನ್ನು ಅರ್ಥಮಾಡಿಕೊಂಡು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತೀಯ ಸಂವಿಧಾನವೇ ಎಲ್ಲರಿಗೂ ಶ್ರೇಷ್ಠ ಮಾರ್ಗದರ್ಶಿಯಾಗಿದ್ದು, ‘ಸಂವಿಧಾನವೇ ನಮ್ಮ ಧರ್ಮ’ ಎಂಬ ಆಶಯದೊಂದಿಗೆ ನಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಜಾವೀದ್ ಇನಾಮದಾರ ಹೇಳಿದರು.ನಗರದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಘಟನೆ ನಡೆದ ಕೂಡಲೇ ಎಫ್‌ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಬಂಧನ ಸೇರಿದಂತೆ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪ್ರಚೋದನನಾಕಾರಿ ಸಂದೇಶಗಳು ಹಾಗೂ ಪೋಸ್ಟರ್‌ಗಳನ್ನು ಹಂಚಿಕೊಳ್ಳುವುದು, ಕೋಮು ಗಲಭೆಗಳಲ್ಲಿ ಭಾಗವಹಿಸುವುದು ಯುವಕರ ಭವಿಷ್ಯಕ್ಕೆ ಧಕ್ಕೆ ತರಬಹುದು. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅನ್ವಯ ಗಡಿಪಾರು, ಗುಂಡಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಜಾತಿ, ಧರ್ಮ ಹಾಗೂ ಯಾವುದೇ ಹಿನ್ನೆಲೆಯನ್ನು ಪರಿಗಣಿಸದೆ ಎಲ್ಲ ಸಮುದಾಯಗಳಿಗೂ ಸಮಾನ ಗೌರವ ಹಾಗೂ ಕಾನೂನಿನಡಿ ಸಮಾನ ರಕ್ಷಣೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ಹಾಗೂ ಸಾಮಾಜಿಕ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು.
ಧರ್ಮ, ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಶಾಂತಿ, ನೆಮ್ಮದಿ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಅಗತ್ಯ. ಇವು ವ್ಯಕ್ತಿತ್ವ ವಿಕಸನದ ಜೊತೆಗೆ ಪರಸ್ಪರ ನಂಬಿಕೆ ಹಾಗೂ ಸಹೋದರತ್ವವನ್ನು ವೃದ್ಧಿಸುತ್ತವೆ. ಯುವಕರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದಂತೆ ಪೋಷಕರು ಹಾಗೂ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಂತಿ, ಸೌಹಾರ್ದತೆ ಕಾಪಾಡಲು ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಪಿಐ ಉಮೇಶ ಎಂ.ನಾಯಕ, ಮಹ್ಮದ್ ಗೌಸ್ ಕನ್ನಿ, ಅಬ್ದುಲ್ ಗಫರ್ ನಗನೂರಿ, ಮೆಹಬೂಬ್ ಒಂಟಿ, ಅಹ್ಮದ್ ದಾವೂದ್ ಇಬ್ರಾಹಿಂ ಪಠಾಣ, ಅಬ್ದುಲ್ ಭಾಷಾ, ಖಾಜಾ ಖಲೀಲ್ ಅಹ್ಮದ, ವೆಂಕಟೇಶ ಎಚ್.ಬೇಟೆಗಾರ, ಶೇಖ ಲಿಯಾತತ್ ಹುಸೇನ, ಭೀಮು ಎಚ್. ನಾಯಕ ಮಲ್ಲಿಬಾವಿ, ನಾಸಿರ್ ಹುಸೇನ್ ಕುಂಡಾಲೆ, ಖಲೀಲ್ ಅಹ್ಮದ್, ಚಂದ್ರಶೇಖರ ಜಡಿಮರಳ, ಮುನಾವರ್ ಬಾಷಾ, ರಾಕೇಶ, ಶಿವಲಿಂಗ ಎಂ. ಹಸನಾಪುರ, ಮಲ್ಲು ಬಿಲ್ಲವ, ಆನಂದ ಬಾದ್ಯಾಪುರ ದೊರಿ, ನಾಗರಾಜ ಬಲಿದವ, ಆದಿತ್ಯ ಬಿಲ್ಲವ, ವಿನಯ ಬಿಲ್ಲವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.