ಮಣ್ಣಿನ ಆರೋಗ್ಯ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಕೃಷಿ ಪದ್ಧತಿಯಲ್ಲಿ ಅವಶ್ಯಕತೆಗೆ ಮೀರಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು

ಯಲಬುರ್ಗಾ: ಪ್ರತಿಯೊಬ್ಬ ರೈತರು ಮಣ್ಣಿನ ಗುಣಧರ್ಮ ಹಾಗೂ ಫಲವತ್ತತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಹಾಗೂ ಮಾಟಲದಿನ್ನಿ ಗ್ರಾಮದ ಗ್ರಾಪಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರ್ತಿ ಮಾತಾ ಬಚಾವೊ (ಭೂಮಿ ಉಳಿಸಿ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣ್ಣಿನ ಆರೋಗ್ಯ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಕೃಷಿ ಪದ್ಧತಿಯಲ್ಲಿ ಅವಶ್ಯಕತೆಗೆ ಮೀರಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು.

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದಲ್ಲದೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಸಾವಯವ ಗೊಬ್ಬರ ಉಪಯೋಗಿಸಬೇಕು. ಮುಂದಿನ ಪಿಳಿಗೆಗೆ ಮಣ್ಣಿನ ಆರೋಗ್ಯ ಕಾಪಾಡಬೇಕು. ಮಣ್ಣಿನ ನೈಸರ್ಗಿಕ ಗುಣಧರ್ಮ ಜೀವಂತವಾಗಿರಿಸಲು ಮತ್ತು ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸಲು ಈ ಅಭಿಯಾನ ಜನಾಂದೋಲನವಾಗಿ ರೂಪುಗೊಂಡಿದೆ. ರಾಸಾಯನಿಕ ಮುಕ್ತ ಕೃಷಿ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜತೆಗೆ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಗ್ರಾಪಂ ಸಿಬ್ಬಂದಿ ಬಸಯ್ಯ ಹಿರೇಮಠ, ಕೃಷಿ ಇಲಾಖೆ ಸಿಬ್ಬಂದಿ ದ್ಯಾಮನಗೌಡ ಕರಿಗೌಡ್ರ, ಕಿರಣ ಕೆಂಚಮ್ಮನವರ, ಕಾಸೀಂಸಾಬ್, ಮಹಾಬಳೇಶ ಚಿಣಗಿ, ರೈತರಾದ ಬಾಳಪ್ಪ ಸಜ್ಜನ, ಚೀಗೆಪ್ಪ ಹಂಚಿನಾಳ, ಹನುಮೇಶ ಕಂಬಳಿ, ಮಂಜುನಾಥ ಗೌಡ್ರ ಸೇರಿದಂತೆ ಮತ್ತಿತರರು ಇದ್ದರು.