ಗದಗ-ಬೆಟಗೇರಿಯಲ್ಲಿ ಅಸಮರ್ಪಕ ಬೀದಿ ದೀಪಗಳ ನಿರ್ವಹಣೆ

| Published : Jan 03 2024, 01:45 AM IST

ಸಾರಾಂಶ

ಗದಗ ಬೆಟಗೇರಿ ಅವಳಿ ನಗರದಲ್ಲಿ ಹಲವಾರು ತಿಂಗಳುಗಳಿಂದ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಕತ್ತಲಲ್ಲಿಯೇ ಸಂಚರಿಸುವಂತಾಗಿದೆ. ಅದರಲ್ಲಿಯೂ ಪ್ರಮುಖ ಬೀದಿಗಳಲ್ಲಿಯೇ ಬೀದಿದೀಪಗಳು ಉರಿಯುತ್ತಿಲ್ಲ, ಉರಿದರೂ ಬೆರಣಿಕೆಯಷ್ಟು ಮಾತ್ರ ಬೆಳಕು ನೀಡುತ್ತಿದ್ದು, ಇನ್ನುಳಿದವರು ಹೆಸರಿಗೆ ಮಾತ್ರ ದೀಪಗಳಾಗಿ ಉಳಿದಿವೆ.

ಬೆಳಕಿನ ಕೊರತೆಯಿಂದ ಪರದಾಡುತ್ತಿದ್ದಾರೆ ಸಾರ್ವಜನಿಕರು

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಹಲವಾರು ತಿಂಗಳುಗಳಿಂದ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಕತ್ತಲಲ್ಲಿಯೇ ಸಂಚರಿಸುವಂತಾಗಿದೆ. ಅದರಲ್ಲಿಯೂ ಪ್ರಮುಖ ಬೀದಿಗಳಲ್ಲಿಯೇ ಬೀದಿದೀಪಗಳು ಉರಿಯುತ್ತಿಲ್ಲ, ಉರಿದರೂ ಬೆರಣಿಕೆಯಷ್ಟು ಮಾತ್ರ ಬೆಳಕು ನೀಡುತ್ತಿದ್ದು, ಇನ್ನುಳಿದವರು ಹೆಸರಿಗೆ ಮಾತ್ರ ದೀಪಗಳಾಗಿ ಉಳಿದಿವೆ.

ಎಲ್ಲೆಲ್ಲಿ ಸಮಸ್ಯೆ?: ಗದಗ ಮತ್ತು ಬೆಟಗೇರಿ ನಗರದ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಗಂಗಿಮಡಿ, ಬೆಟಗೇರಿಯ ಭಜಂತ್ರಿ ನಗರ, ವಾಲ್ಮೀಕಿ ನಗರ, ನರಸಾಪುರ ಆಶ್ರಯ ಕಾಲನಿ, ಹನುಮಾನಸಿಂಗ್ ಜಮಾದಾರ ನಗರ, ಬೆಟಗೇರಿಯ ಸಿದ್ದಲಿಂಗೇಶ್ವರ ನಗರ, ಶರಣ ಬಸವೇಶ್ವರ ನಗರ, ಸಂಭಾಪುರ ರಸ್ತೆ, ಸಿಕ್ಕಲಗಾರ ಕಾಲನಿ ಸೇರಿದಂತೆ ನಗರದಲ್ಲಿ ಹಲವೆಡೆ ಬೀದಿದೀಪಗಳನ್ನು ಹಲವಾರು ತಿಂಗಳುಗಳಿಂದ ಬದಲಾಯಿಸಿಲ್ಲ.

ಮುಖ್ಯವಾಗಿ ಹಲವು ತಿಂಗಳಿಂದ ಪ್ರಮುಖ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಮೀಡಿಯನ್ ದೀಪಗಳು ಉರಿಯದೇ ತಿಂಗಳುಗಳೇ ಕಳೆದಿವೆ. ರಿಂಗ್ ರೋಡ್‌ನಿಂದ ಕಿತ್ತೂರು ಚೆನ್ನಮ್ಮ ವೃತ್ತದ ವರೆಗಿನ ಬಲ್ಬಗಳು ಆರಿಯೇ ಬಹಳ ದಿನಗಳು ಕಳೆದಿದ್ದರೂ ವಿದ್ಯುತ್ ಗುತ್ತಿಗೆ ಪಡೆದವರು ಮಾತ್ರ ಇತ್ತ ಗಮನಿಸುತ್ತಿಲ್ಲ. ಮುಖ್ಯವಾಗಿ ಬಡವರು ಮತ್ತು ಅಲ್ಪಸಂಖ್ಯಾತರು ಹೆಚ್ಚು ವಾಸಿಸುತ್ತಿರುವ ಹಾಗೂ ಸ್ಲಂ ಏರಿಯಾದಲ್ಲೇ ಬೀದಿ ದೀಪದ ಸಮಸ್ಯೆ ಹೆಚ್ಚು ಕಂಡು ಬರುತ್ತಿದೆ. ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳ ದುರಸ್ತಿ ಕಾರ್ಯ ನಡೆಸಬೇಕಿದೆ.

ನಿರ್ವಹಣೆಗೆ ₹11.42 ಲಕ್ಷ: ಅವಳಿ ನಗರದ ಬೀದಿದೀಪಗಳ ನಿರ್ವಹಣೆಗಾಗಿ ನಗರಸಭೆಯ ಆಡಳಿತ ಮಂಡಳಿ ಪ್ರತಿ ತಿಂಗಳು ₹11.42 ಲಕ್ಷ ಬಿಲ್ ಪಾವತಿಸುವ ಕಾರ್ಯಾದೇಶವನ್ನು 2023ರ ಡಿಸೆಂಬರ್ 1ರಂದು ಹೊರಡಿಸಲಾಗಿದೆ. ಆದರೆ ಅಧಿಕೃತ ಆದೇಶವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಭೌತಿಕ ಕಾಮಗಾರಿಯಲ್ಲಿ ಮಾತ್ರ ಯಾವುದೇ ಪ್ರಗತಿ ಆಗಿಲ್ಲ ಎನ್ನುವುದು ರಾತ್ರಿ ವೇಳೆಯಲ್ಲಿ ಅವಳಿ ನಗರದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಗೋಚರವಾಗುವ ಸತ್ಯವಾಗಿದೆ. ಹಲವು ಅನುಮಾನಗಳು

ಗದಗ -ಬೆಟಗೇರಿ ನಗರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರಲ್ಲಿಯೂ ತೆರಿಗೆ ಸಂಗ್ರಹ ಸೇರಿದಂತೆ ವಿವಿಧ ಕಾರ್ಯಗಳು ಸಮರ್ಪಕವಾಗಿ ಪ್ರಗತಿಯಾಗುತ್ತಿಲ್ಲ. ಇದರಿಂದಾಗಿ ಪ್ರತಿ ತಿಂಗಳು ರು. 47 ಲಕ್ಷ ಕೊರತೆಯನ್ನು ನಗರಸಭೆ ಅನುಭವಿಸುತ್ತಿದೆ. ಇದರ ಮಧ್ಯೆಯೇ ಸಾಮಾನ್ಯ ನಿಧಿಯಿಂದಲೇ ವಾರ್ಷಿಕ ರು. 1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪ ನಿರ್ವಹಣೆ ಗುತ್ತಿಗೆ ನೀಡಲಾಗಿದೆ. ಈ ವಿಷಯದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದ್ದು, ಇದಕ್ಕೆ ನಗರಸಭೆಯ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರೇ ಉತ್ತರಿಸಬೇಕಿದೆ. ಮಾಹಿತಿ: ಒಟ್ಟು 35 ವಾರ್ಡ್‌ಗಳನ್ನು ಹೊಂದಿರುವ ಅವಳಿ ನಗರದಲ್ಲಿ 11,956 ಬೀದಿದೀಪಗಳನ್ನು ಅಳವಡಿಸಿರುವುದಾಗಿ ನಗರಸಭೆಯ ದಾಖಲೆಗಳು ಹೇಳುತ್ತಿವೆ. ಇಷ್ಟೊಂದು ಸಂಖ್ಯೆಯ ಬೀದಿ ದೀಪಗಳ ನಿರ್ವಹಣೆಗಾಗಿಯೇ ಪ್ರತಿ ತಿಂಗಳೂ ಲಕ್ಷಾಂತರ ಖರ್ಚು ಮಾಡಲಾಗುತ್ತಿದೆ. ಆದರೆ ಶೇ. 50ಕ್ಕಿಂತಲೂ ಹೆಚ್ಚಿನ ಬಲ್ಬಗಳು ಉರಿಯುತ್ತಿಲ್ಲ. ಇದು ಕೂಡಾ ಒಂದು ದೊಡ್ಡ ಮೋಸವೇ ಆಗಿದೆ ಎನ್ನುವುದು ಆಡಳಿತ ಮತ್ತು ವಿರೋಧ ಪಕ್ಷದ ಭೇದ-ಭಾವವಿಲ್ಲದೇ ಎರಡೂ ಪಕ್ಷಗಳ ನಗರಸಭೆಯ ಸದಸ್ಯರೇ ಆಡುವ ಮಾತಾಗಿದೆ.

ಹಣ ಪಾವತಿಯಾಗುತ್ತಿದೆ:

ಬೀದಿ ದೀಪಗಳ ನಿರ್ವಹಣೆ ಎನ್ನುವುದು ನಗರಸಭೆಯ ಕೆಲ ಸದಸ್ಯರು, ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಪ್ರತಿ ತಿಂಗಳು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. 2022-23 ವಾರ್ಷಿಕ ಅವಧಿಯಲ್ಲಿ ಗುತ್ತಿಗೆಯ ಮೂಲ ಬೆಲೆ ₹99.89 ಲಕ್ಷಕ್ಕೆ ಗದಗ ನಗರದ ಸಂಸ್ಥೆಯೊಂದಕ್ಕೆ ಬೀದಿ ದೀಪಗಳ ಕಾರ್ಯ ನಿರ್ವಹಣೆಗೆ ಗುತ್ತಿಗೆ ನೀಡಲಾಗಿತ್ತು. ಆಗಿನಿಂದಲೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ. ಪ್ರಸಕ್ತ ಸಾಲಿನಲ್ಲಿಯೂ ಗದಗ ನಗರದ ಮತ್ತೊಂದು ಸಂಸ್ಥೆಗೆ ವಾರ್ಷಿಕ ₹1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪಗಳ ನಿರ್ವಹಣೆ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯಾಗಲಿ ಅಥವಾ ಹಿರಿಯ ಅಧಿಕಾರಿಗಳಾಗಲಿ ಸಮರ್ಪಕವಾದ ರೀತಿಯಲ್ಲಿ ತನಿಖೆ ನಡೆಸಿದಲ್ಲಿ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂಬ ಆಗ್ರಹ ಕೇಳಿ ಬರುತ್ತಿದೆ.