ತೆನೆಯೊಡೆದರೂ ಕಾಳುಕಟ್ಟದ ಮೆಕ್ಕೆಜೋಳ, ಸಂಕಷ್ಟದಲ್ಲಿ ರೈತರು

| Published : Sep 28 2024, 01:23 AM IST

ತೆನೆಯೊಡೆದರೂ ಕಾಳುಕಟ್ಟದ ಮೆಕ್ಕೆಜೋಳ, ಸಂಕಷ್ಟದಲ್ಲಿ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ನಿವಾಸಿ ಮಂಜುರಡ್ಡಿ ಹಂಗನಕಟ್ಟಿ ಅವರು ತಮ್ಮ 9 ಎಕರೆಯಲ್ಲಿ ಬಿತ್ತಿದ ಮೆಕ್ಕೆಜೋಳದಲ್ಲಿ ಕಾಳು ಕಟ್ಟಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಆಳೆತ್ತರ ಬೆಳೆದ ನಿಂತ ಮೆಕ್ಕಜೋಳದಲ್ಲಿ ತೆನೆಯೂ ಗೇಣುದ್ದಕ್ಕೂ ದೊಡ್ಡದೇ ಇದೆ. ಆದರೆ, ಉದ್ದುದ್ದ ತೆನೆಯಲ್ಲಿ ನಾಲ್ಕೇ ನಾಲ್ಕು ಕಾಳು ಸಹ ಇಲ್ಲ. ಅಲ್ಲೊಂದು ಇಲ್ಲೊಂದು ಇವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ವರ್ಷ ಮೆಕ್ಕೆಜೋಳ ದರವೂ ಭರ್ಜರಿಯಾಗಿಯೇ ಇದೆ. ಬೆಳೆಯೂ ಭರ್ಜರಿಯಾಗಿಯೇ ಬರಬಹುದು ಎಂದುಕೊಂಡಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಬೆಳೆದು ನಿಂತಿರುವ ಮೆಕ್ಕೆಜೋಳ ಕಾಳುಕಟ್ಟದೆ ಇರುವುದನ್ನು ಕಂಡು ರೈತರು ಕುಗ್ಗಿಹೋಗಿದ್ದಾರೆ.

ತಾಲೂಕಿನ ಹಿರೇಸಿಂದೋಗಿ ಗ್ರಾಮದ ನಿವಾಸಿ ಮಂಜುರಡ್ಡಿ ಹಂಗನಕಟ್ಟಿ ಅವರು ತಮ್ಮ 9 ಎಕರೆಯಲ್ಲಿ ಮೆಕ್ಕೆಜೋಳ ಹಾಕಿದ್ದಾರೆ. ಬೀಜ-ಗೊಬ್ಬರ ಸೇರಿದಂತೆ ಎಕರೆಗೆ ₹15-20 ಸಾವಿರ ಖರ್ಚು ಮಾಡಿದ್ದಾರೆ. ಬೆಳೆಯೂ ಭರ್ಜರಿಯಾಗಿಯೇ ಬಂದಿದೆ. ಬೆಳೆದು ನಿಂತಿರುವ ಮೆಕ್ಕೆಜೋಳವನ್ನು ನೋಡಿ ಈ ವರ್ಷ ಬಂಪರ್ ಲಾಭ ಸಿಗಬಹುದು ಎನ್ನುವ ನಿರೀಕ್ಷೆ ಮೂಡಿತ್ತು, ಆದರೆ ಮೆಕ್ಕೆಜೋಳದ ತೆನೆ ನೋಡಿದಾಗ ನಿರೀಕ್ಷೆ ಹುಸಿಯಾಗಿದೆ.

ಅತ್ಯುತ್ತಮವಾಗಿಯೇ ಇರುವ ತೆನೆಗಳಲ್ಲಿ ಕಾಳೇ ಆಗಿಲ್ಲ. ಹೊಲದಲ್ಲಿ ಹಾಕಿರುವ 9 ಎಕರೆ ಬೆಳೆಯಲ್ಲಿಯೂ ಬಿಟ್ಟಿರುವ ತೆನೆ ಖಾಲಿ ಇದೆ. ಒಂದು ತೆನೆಗೆ ನಾಲ್ಕು ಕಾಳು ಸಹ ಇಲ್ಲ.

ಸರಿಯಾಗಿ ಕಾಳು ಕಟ್ಟಿದ್ದರೆ 250-300 ಕ್ವಿಂಟಲ್ ಮೆಕ್ಕೆಜೋಳವಾಗುತ್ತಿತ್ತು. ಈಗಿರುವ ಬೆಲೆಯ ಲೆಕ್ಕಾಚಾರದಲ್ಲಿ ₹6 ರಿಂದ ₹8 ಲಕ್ಷ ಆದಾಯ ಬರಬೇಕಿತ್ತು. ಆದರೆ, ಈಗ ಒಂದು ನಯಾಪೈಸೆಯೂ ಸಿಗುವುದಿಲ್ಲ ಎನ್ನುವಂತೆ ಆಗಿದೆ.

ಕಂಪನಿ ನಿರ್ಲಕ್ಷ್ಯ: ಸಿಂಜೆಂಟಾ ಕಂಪನಿಯ ಬೀಜಗಳು ಇದಾಗಿವೆ. ಈ ಕುರಿತು ರೈತರು ಕಂಪನಿಯ ಪ್ರತಿನಿಧಿಗಳಿಗೆ ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ನಮ್ಮದು ದೊಡ್ಡ ಕಂಪನಿ, ನೀವು ಏನು ಮಾಡಿಕೊಳ್ಳಲು ಆಗುವುದಿಲ್ಲ. ಬೇಕಾದರೆ ಹಾಕಿದ ಬೀಜಗಳನ್ನೇ ಮತ್ತೊಮ್ಮೆ ಕೊಡುತ್ತೇವೆ, ಪರಿಹಾರ ಕೇಳಬೇಡಿ ಎಂದು ಸಿಂಜೆಂಟಾ ಕಂಪನಿ ಏರಿಯಾ ಮ್ಯಾನೇಜರ್ ಮನೋಹರ ಹೇಳುತ್ತಾರಂತೆ.

ಬೇಕಾದರೆ ನಮ್ಮ ಕಂಪನಿಯ ವಿರುದ್ಧ ಕೇಸ್ ಹಾಕಿ. ನೀವೇ ಕೋರ್ಟಿಗೆ ಅಲೆಯಬೇಕಾಗುತ್ತದೆ ಎಂದೆಲ್ಲ ಹೆದರಿಸಿದ್ದಾರೆ. ಬಂದು ನೋಡಿ ಎಂದರೂ ತಯಾರಿಲ್ಲ. ನಾನು ನೋಡಿ ಬಂದಿದ್ದೇನೆ, ಕಾಳು ಕಟ್ಟಿಲ್ಲ, ಈಗ ಏನು ಮಾಡುವುದು ಎಂದಿದ್ದಾರೆ ಎಂದು ರೈತರು ಹೇಳುತ್ತಾರೆ.

ಇದು ಒಬ್ಬ ರೈತರ ಕತೆಯಲ್ಲ, ಜಿಲ್ಲೆಯಲ್ಲಿ ಕೆಲವೊಂದಿಷ್ಟು ರೈತರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಕೃಷಿ ಇಲಾಖೆ ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದಾರೆ. ವಿಜ್ಞಾನಿಗಳು ಹೊಲಕ್ಕೆ ಭೇಟಿ ನೀಡಿ, ಸ್ಯಾಂಪಲ್ ಸಂಗ್ರಹಿಸಿಟ್ಟುಕೊಂಡಿದ್ದಾರೆ. ವಿಜ್ಞಾನಿಗಳು ವರದಿ ಕಾಯಲಾಗುತ್ತಿದೆ.

ಅತಿಯಾದ ತೇವಾಂಶ: ಅತಿಯಾದ ಮಳೆಯಾಗಿ ಮತ್ತು ಆನಂತರ ಕಾಳುಕಟ್ಟುವ ವೇಳೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಹೀಗಾಗಿದೆ. ಕಂಪನಿಯ ಬೀಜದ ಸಮಸ್ಯೆಯೇ ಅಲ್ಲ. ಅದೇ ಬೀಜವನ್ನು ಇತರ ರೈತರಿಗೆ ನೀಡಿದ್ದು, ಕಾಳು ಕಟ್ಟಿದೆ ಎನ್ನುತ್ತಾರೆ ಬೀಜ ಕಂಪನಿಯ ಪ್ರತಿನಿಧಿಗಳು.

ಪರಿಹಾರಕ್ಕೆ ಆಗ್ರಹ: ಕಷ್ಟಪಟ್ಟು ಬೆಳೆ ಬೆಳೆದರೂ ಫಲ ನೀಡದೆ ಇರುವುದರಿಂದ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಬೀಜ, ಗೊಬ್ಬರ ಹಾಕಿ, ಹಗಲು, ಇರುಳು ಶ್ರಮ ವಹಿಸಿದ್ದೇವೆ. ಲಕ್ಷಾಂತರ ಬರಬೇಕಾಗಿದ್ದರೂ ನಯಾಪೈಸೆ ಬರದಿದ್ದರೆ ಹೇಗೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಬೆಳೆದ ಬೆಳೆ ಅತ್ಯುತ್ತಮವಾಗಿಯೇ ಇದ್ದರೂ ಕಾಳುಕಟ್ಟದೆ ಇದ್ದರೆ ಹೇಗೆ? ವಿಷಯ ತಿಳಿದ ಮೇಲೂ ಬೀಜ ಕಂಪನಿಯವರು ಸ್ಪಂದಿಸುತ್ತಿಲ್ಲ. ಹೀಗಾಗಿ, ಕೃಷಿ ಇಲಾಖೆಗೆ ದೂರು ನೀಡಿದ್ದೇವೆ ಎಂದು ರೈತ ಮಂಜುರಡ್ಡಿ ಹಂಗನಕಟ್ಟಿ ಹೇಳಿದರು.

ಬೆಳೆದು ನಿಂತಿರುವ ಮೆಕ್ಕೆಜೋಳ ಅಲ್ಲಲ್ಲಿ ಕಾಳುಕಟ್ಟಿಲ್ಲ. ಹೀಗಾಗಿ, ಈಗಾಗಲೇ ಪರಿಶೀಲನೆ ಮಾಡಿ, ವಿಜ್ಞಾನಿಗಳನ್ನು ಕರೆಯಿಸಿ, ತೋರಿಸಿದ್ದೇವೆ. ಸ್ಯಾಂಪಲ್ ಪಡೆದಿದ್ದು, ಪ್ರಯೋಗಾಲಯ ವರದಿ ಬರಬೇಕಾಗಿದೆ ಎಂದು ಜಂಟಿ ನಿರ್ದೇಶಕ ರುದ್ರೇಶಪ್ಪ ಹೇಳಿದರು.

ಕಾಳುಕಟ್ಟದೆ ಇರುವ ಮಾಹಿತಿ ಗೊತ್ತಾಗಿದೆ. ನಾವು ಭೇಟಿ ನೀಡಿದ್ದೇವೆ. ಆದರೆ, ಇದಕ್ಕೆಲ್ಲ ಪರಿಹಾರ ನೀಡಲು ಆಗುವುದಿಲ್ಲ. ಅತಿಯಾದ ತೇವಾಂಶದಿಂದ ಹೀಗಾಗಿದೆ. ಇದು ಹವಮಾನ ವೈಪರಿತ್ಯದಿಂದ ಆಗಿರುವ ಸಮಸ್ಯೆ ಎಂದು ಸಿಂಜೆಂಟಾ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ ಮನೋಹರ ಹೇಳುತ್ತಾರೆ.