ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೂ ನ್ಯಾಯ ಮತ್ತು ಸೂಕ್ತ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ನೋಂದಣಿಗೆ ಅಲೆದಾಡುವಂತಾಗಬಾರದು. ಅಧಿಕಾರಿಗಳು ತಮ್ಮ ಹಂತದಲ್ಲಿ ಬಗೆಹರಿಸುವ ಕೆಲಸಕ್ಕೆ ಸರ್ಕಾರದ ಕಡೆ ಬೊಟ್ಟು ಮಾಡುವ ಚಾಳಿ ಬಿಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಶಿರಹಟ್ಟಿ: ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತು ನೋಂದಣಿ ಪ್ರಕ್ರಿಯೆ ಬುಧವಾರ ಮಧ್ಯಾಹ್ನ ಆರಂಭವಾಗಿ ಕೇವಲ ೪೦ ನಿಮಿಷದಲ್ಲಿ ಸರ್ವರ್ ಸಮಸ್ಯೆಯಿಂದ ಬಂದಾಗಿದ್ದರಿಂದ ಆಕ್ರೋಶಗೊಂಡ ರೈತರು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಂಎಸ್) ಕೇಂದ್ರದೆದುರು ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಅಧಿಕಾರಿಗಳ ನಡೆ ಬಗ್ಗೆ ಆಕ್ರೋಶ ಹೊರಹಾಕಿದರು.ನಂತರ ನೂರಾರು ಜನ ರೈತರು ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಆದಷ್ಟು ಬೇಗ ಸರ್ವರ್ ಸಮಸ್ಯೆ ಸರಿಪಡಿಸಿ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಶಿರಸ್ತೇದಾರ ಎಚ್.ಜೆ. ಭಾವಿಕಟ್ಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ರೈತರಾದ ಗೂಳಪ್ಪ ಕರಿಗಾರ, ಸಂತೋಷ ಕುರಿ ಮಾತನಾಡಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಂಎಸ್) ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತು ನೋಂದಣಿ ಪ್ರಕ್ರಿಯೆ ಆರಂಭವಾದ ೪೦ ನಿಮಿಷದಲ್ಲಿ ಬಂದಾಗಿದೆ. ಕೇವಲ ೬೮ ಜನ ರೈತರ ನೋಂದಣಿ ಮಾತ್ರ ಆಗಿದ್ದು, ಅಧಿಕಾರಿಗಳು ಹೇಳುವಂತೆ ಒಟ್ಟು ೧೩೮ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ತಿಳಿಸಿದ್ದು, ರೈತರು ತಮ್ಮ ಕೆಲಸ ಕಾರ್ಯಬಿಟ್ಟು ನೋಂದಣಿ ಮಾಡಿಸಲು ಬಂದರೆ ಸರ್ವರ್ ಸಮಸ್ಯೆಯಿದೆ ಎಂದು ಹೇಳುತ್ತಿದ್ದಾರೆ.ಮೆಕ್ಕೆಜೋಳ ಉತ್ತರ ಕರ್ನಾಟಕ ಭಾಗದ ರೈತರ ಪ್ರಮುಖ ಬೆಳೆಯಾಗಿದೆ. ಈ ಬಾರಿ ಗುರಿಗಿಂತಲೂ ಹೆಚ್ಚು ಬೆಳೆದಿದ್ದು, ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹೨೪೦೦ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ಈವರೆಗೂ ಖರೀದಿ ಕೇಂದ್ರ ಓಪನ್ ಆಗಿಲ್ಲ. ರೈತರು ಬೀಜ, ರಸಗೊಬ್ಬರ, ಕಳೆನಾಶಕಕ್ಕಾಗಿ ಸಾಲ ತೀರಿಸಲು ಅನಿವಾರ್ಯವಾಗಿ ₹೧೬೦೦ರಿಂದ ₹೧೭೦೦ ಅಥವಾ ವರ್ತಕರು ಕೊಟ್ಟಷ್ಟು ಹಣಕ್ಕೆ ಮೆಕ್ಕೆಜೋಳ ಮಾರಾಟ ಮಾಡುವಂತಾಗಿದೆ ಎಂದರು.ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತು ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಪಟ್ಟಣದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ನ. ೧೭ರಂದು ಎತ್ತು, ಚಕ್ಕಡಿ ಸಮೇತ ಹಾಗೂ ಶಿರಹಟ್ಟಿ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇಷ್ಟೆಲ್ಲ ಹೋರಾಟದ ನಡುವೆ ತಡವಾಗಿ ಆರಂಭವಾದ ಖರೀದಿ ಕೇಂದ್ರ ಕೇವಲ ೪೦ ನಿಮಿಷದಲ್ಲಿ ಬಂದಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.ಮುಂಗಾರು ಹಂಗಾಮಿನಲ್ಲಿ ವಿಪರೀತ ಮಳೆ ಸುರಿದು ಹೆಸರು ಬೆಳೆ ಕೂಡ ಸಂಪೂರ್ಣ ಹಾಳಾಗಿ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿ ಹೋಯಿತು. ಹಿಂಗಾರು ವಾಣಿಜ್ಯ ಬೆಳೆ ಮಕ್ಕೆಜೋಳಕ್ಕೆ ಸರಿಯಾದ ಬೆಲೆ ಸಿಗದೇ ರೈತರ ಶ್ರಮಕ್ಕೆ ತಕ್ಕ ಬೆಲೆ ಇಲ್ಲದಂತಾಗಿದೆ. ಅಲ್ಪಸ್ವಲ್ಪ ಹಣ ಬಂದರೆ ವರ್ಷ ಇಡೀ ಕುಟುಂಬ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂಬ ಆಶಾಭಾವನೆಯಲ್ಲಿರುವ ರೈತರಿಗೆ ಅದಕ್ಕೂ ಸರ್ಕಾರಗಳು ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ರೈತರಲ್ಲಿಯೇ ಒಡೆದಾಳುವ ನೀತಿ ಮಾಡಬಾರದು. ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೂ ನ್ಯಾಯ ಮತ್ತು ಸೂಕ್ತ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ನೋಂದಣಿಗೆ ಅಲೆದಾಡುವಂತಾಗಬಾರದು. ಅಧಿಕಾರಿಗಳು ತಮ್ಮ ಹಂತದಲ್ಲಿ ಬಗೆಹರಿಸುವ ಕೆಲಸಕ್ಕೆ ಸರ್ಕಾರದ ಕಡೆ ಬೊಟ್ಟು ಮಾಡುವ ಚಾಳಿ ಬಿಡಬೇಕು. ಮೊದಲೇ ರೈತರು ಕೃಷಿಯಿಂದ ಬೇಸತ್ತಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.ರವಿ ಹಳ್ಳಿ, ಶಶಿಧರ ತೋಡೇಕಾರ, ಆನಂದ ಕೋಳಿ, ಶಿವಬಸಪ್ಪ ನಿಟ್ಟೂರ, ಉಮೇಶ ಗುಗ್ಗರಿ, ಕಿರಣ ಮಾನೆ, ಚಾಂದಸಾಬ ಮುಳಗುಂದ, ಪರಶುರಾಮ ಹಾದಿಮನಿ, ಇಸ್ಮಾಯಿಲ್ ನದಾಫ್, ಸಂದೀಪ ಕೋಳಿ, ಮಲ್ಲೇಶ ಕಬಾಡಿ, ರಮೇಶ ಲಮಾಣಿ, ವಿ.ಎಂ. ಕಪ್ಪತ್ತನವರ, ಮಹೇಶ ಸಜ್ಜನ, ಎನ್.ಎಂ. ಕುರ್ತಕೋಟಿ ಸೇರಿ ಅನೇಕ ರೈತರು ಮನವಿ ನೀಡುವಲ್ಲಿ ಇದ್ದರು.