ಸಾರಾಂಶ
ಶಿವಮೊಗ್ಗ: ಜಿಲ್ಲೆಯಲ್ಲಿ ಭಾರತೀಯ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರದಿಂದ ಆನುಮತಿ ದೊರಕಿದೆ. ನಗರದ ನವುಲೆಯ ಕೃಷಿ ವಿಶ್ವವಿದ್ಯಾಲಯದ 45 ಎಕ್ಕರೆ ಜಾಗದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಶೋಧನಾ ಕೇಂದ್ರಕ್ಕೆ ಪೂರಕವಾದ ಎಲ್ಲಾ ಅಂಶಗಳು ಶಿವಮೊಗ್ಗದಲ್ಲಿ ಇರುವುದನ್ನು ಪರಿಗಣಿಸಿ ಪಂಜಾಬ್‌ನ ಲುಧಿಯಾನದಿಂದ ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದರು.ಈ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಕೇಂದ್ರ ಸಚಿವರಾದ ಕೈಲಾಶ್ ಚೌಧರಿ ಅವರು ಪತ್ರದ ಮೂಲಕ ತಿಳಿಸಿದ್ದಾರೆ. ಮಕ್ಕೆಜೋಳ ಉತ್ಪಾದನೆಯಲ್ಲಿ ದೇಶ ಏಳನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕ (ಶೇ.15), ಮಹಾರಾಷ್ಟ್ರ (ಶೇ.10), ಉತ್ತರ ಪ್ರದೇಶ (ಶೇ.5) ಸೇರಿ ಒಟ್ಟು 20,12,670, ಹೆಕ್ಟೇರ್ (53 ಸಾವಿರ ಎಕರೆ) ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ಸಮಶೋಧನಾ ಕೇಂದ್ರ ಸ್ಥಾಪನೆಯಿಂದ ಮೆಕ್ಕೆಜೋಳ ಉತ್ಪಾದನೆಗೆ ಉತ್ತೇಜನ ದೊರಕಲಿದೆ. ಮೆಕ್ಕೆಜೋಳಕ್ಕೆ ರೋಗಗಳು ಹೆಚ್ಚುತ್ತಿವೆ. ಆದ್ದರಿಂದ, ಇದರ ಸಂಶೋಧನೆ ಕೈಗೊಳ್ಳಲು ಅನುಕೂಲ ಆಗಲಿದೆ. ಇಲ್ಲಿ ನುರಿತ ವಿಜ್ಞಾನಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಇದರಿಂದ, ಮೌಲ್ಯವರ್ಧನ, ನಿರ್ವಹಣೆ ಕೇಂದ್ರದಿಂದ ಆಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮಾಲತೇಶ್, ಜಗದೀಶ್, ವಿನ್ಸೆಂಟ್ ರೋಡ್ರಿಗಸ್, ಸಿಂಗನಳ್ಳಿ ಸುರೇಶ್, ವಿರುಪಾಕ್ಷಪ್ಪ ಇದ್ದರು.ಹಸುಗಳ ಕೆಚ್ಚಲು ಕೊಯ್ದವರ
ವಿರುದ್ಧ ಕಠಿಣ ಕ್ರಮಕೈಗೊಳ್ಳಿಶಿವಮೊಗ್ಗ: ಬೆಂಗಳೂರು ಚಾಮರಾಜಪೇಟೆ ಹಳೇ ಪೆನ್ನನ್ ಮೊಹಲ್ಲಾದ ರಸ್ತೆಯ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ಮಚ್ಚಿನಿಂದ ಕಾಲಿಗೆ ಹೊಡೆದಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ. ಇದೊಂದು ರಾಕ್ಷಸಿ, ಅಮಾನವೀಯ ಮತ್ತು ಹೇಯ ಕೃತ್ಯವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.
ಹೆತ್ತ ತಾಯಿಗೆ ವಿಷ ಕೊಡುವುದು ಒಂದೇ, ಹಸುವಿನ ಕೆಚ್ಚಲು ಕೊಯ್ಯುವ ಕೆಲಸ ಮೃಗಗಳ ರೀತಿಯ ನಡವಳಿಕೆ ಒಂದೇ. ರಾಜ್ಯ ಸರ್ಕಾರ ಇಂತಹ ಪ್ರಕರಣಗಳಲ್ಲಿ ಕಠೋರ ನಿಲುವು ತಳದಿರುವುದರ ಹಿನ್ನೆಲೆ ಹೆಚ್ಚಾಗಿದೆ ಎಂದು ಆರೋಪಿಸಿದರು.ಭದ್ರಾವತಿಯಿಂದ ಚಿಕ್ಕಜಾಜೂರು ಜಂಕ್ಷನ್ ಗೆ ರೈಲ್ವೆ ಮಾರ್ಗ ಬಜೆಟ್‌ನಲ್ಲಿ ಘೋಷಣೆಯ ಸಾಧ್ಯತೆ ಇದೆ. ಇದರಿಂದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಬಳ್ಳಾರಿಯಿಂದ ಮೈನ್ಸ್ ತರಲು ಅನುಕೂಲವಾಗಲಿದೆ. ಜೊತೆಗೆ ಶಿವಮೊಗ್ಗದಿಂದ ಹಗರಿಬೊಮ್ಮನಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಗಂದೂರು ಸೇತುವೆ ಮುಂದಿನ ತಿಂಗಳಲ್ಲಿ ಪ್ರಾಯೋಗಿಕವಾಗಿ ಸರ್ಕಾರಕ್ಕೆ ಅನುವು ಮಾಡಿಕೊಡಲಾಗುವುದು. ನಂತರ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಇದರ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.