ಗ್ರಾಮಗಳಿಂದ ಪಟ್ಟಣಕ್ಕೆ ಬರುವವರು , ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ರಾತ್ರಿ ವೇಳೆ ಸಂಚರಿಸುವಾಗ ತೊಂದರೆ ಅನುಭವಿಸುವಂತಾಗಿದೆ.
ಪ್ರಕಾಶ ಎಸ್.ಕೊಳಲ ಬಂಕಾಪುರ
ಪಟ್ಟಣದ ಬಸ್ ನಿಲ್ದಾಣ ಹತ್ತಿರವಿರುವ ಬಾಡ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸದೇ ಇರುವುದರಿಂದ ರಾತ್ರಿ ವೇಳೆ ಈ ಭಾಗದಲ್ಲಿ ಕತ್ತಲು ಆವರಿಸುತ್ತಿದೆ. ಪ್ರತಿದಿನ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ಈ ವೃತ್ತದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.ಈ ವೃತ್ತವು ಕಾರವಾರ ಇಳಕಲ್ಲ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಹಾಗೂ ಈ ಮಾರ್ಗವಾಗಿಯೇ ಮುನವಳ್ಳಿ, ಸದಾಶಿವಪೇಟೆ , ನಾರಾಯಣಪೂರ, ಬಾಡ ಹಾಗೂ ಕಲ್ಯಾಣ ಗ್ರಾಮಗಳಿಗೆ ಹೋಗುವ ವಾಹನಗಳು ಇಲ್ಲಿಯೇ ನಿಲ್ಲುವುದರಿಂದ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಕತ್ತಲಿನಲ್ಲಿ ಅಪಘಾತಗಳಾಗುವ ಅಪಾಯವೂ ಇದೆ.
ಪಟ್ಟಣದ ಪ್ರಸಿದ್ದ ನಗರೇಶ್ವರ ಕೋಟೆಯು ಈ ವೃತ್ತಕ್ಕೆ ಹೊಂದಿಕೊಂಡಿರುವುದರಿಂದ ರಾತ್ರಿ ಕತ್ತಲಿನ ವೇಳೆಯಲ್ಲಿ ಕುಡುಕರು ಕೋಟೆ ಆವರಣದಲ್ಲಿಯೇ ಕುಳಿತು ಕುಡಿದು ಬಾಟಲಿಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡುವುದರಿಂದ ಎಲ್ಲೆಲ್ಲೂ ಬಾಟಲಿಗಳೇ ಕಾಣಿಸುತ್ತಿದ್ದು ಕೋಟೆ ಆವರಣವು ಕುಡುಕರ ತಾಣವಾಗಿದೆ.ಗ್ರಾಮಗಳಿಂದ ಪಟ್ಟಣಕ್ಕೆ ಬರುವವರು , ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ರಾತ್ರಿ ವೇಳೆ ಸಂಚರಿಸುವಾಗ ತೊಂದರೆ ಅನುಭವಿಸುವಂತಾಗಿದೆ.
ಸುಮಾರು ದಿನಗಳಿಂದ ಈ ವೃತ್ತದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಮೋಟಾರ್ ಸೈಕಲ್ಗಳ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೆ. ಗ್ರಾಮಗಳಿಂದ ಬರುವ ಜನರು ಅಸಹಾಯಕತೆಯಿಂದ ಪಟ್ಟಣದ ಅವ್ಯವಸ್ಥೆಯ ಕುರಿತು ಶಾಪ ಹಾಕಿ ಹೋಗುವಂತಾಗಿದೆ.ಕನಕದಾಸರ ಅರಮನೆಗೆ ಹೋಗುವ ರಸ್ತೆಗೆ ವೃತ್ತದಲ್ಲಿ ಕಳಶದಂತಿರುವ ಕನಕದಾಸರ ದ್ವಾರಬಾಗಿಲು ಕತ್ತಲಿನಲ್ಲಿ ಕಾಣದಂತಾಗಿದೆ. ರಾತ್ರಿ ವೇಳೆಯಲ್ಲಿ ಇದರ ಸುತ್ತಲೂ ಕೆಲವರು ಮೂತ್ರ ವಿಸರ್ಜನೆ ಮಾಡುವ ಹಾಗೂ ಮದ್ಯದ ಡಬ್ಬಿಗಳನ್ನು ಎಸೆಯುವ ಕೃತ್ಯಗಳು ನಡೆಯುತ್ತಿವೆ.
ಇಂತಹ ಪ್ರಮುಖ ಸರ್ಕಲ್ನಲ್ಲಿ ಹೈಮಾಸ್ಟ್ ದೀಪ ಅಳವಡಿಸುವುದು ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರದ ದೃಷ್ಟಿಯಿಂದ ಅಗತ್ಯವಾಗಿದೆ. ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತವಾಗಿದ್ದರೂ ಹಾಗೂ ಕಾರವಾರ ಇಳಕಲ್ಲ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಇಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸರ್ಕಲ್ನಲ್ಲಿ ಹೈಮಾಸ್ಟ್ ದೀಪ ಅಳವಡಿಸಿ ದಿನನಿತ್ಯ ಸಂಚರಿಸುವ ವಾಹನ ಹಾಗೂ ಸಂಚಾರಿಗಳಿಗೆ ನಿರ್ಭೀತಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಸುಮಾರು ದಿನಗಳಿಂದ ಬಾಡ ವೃತ್ತವು ಕತ್ತಲಿನ ಗೂಡಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸರ್ಕಲ್ ಗೆ ಹೈಮಾಸ್ಟ್ ದೀಪದ ವ್ಯವಸ್ಥೆ ಕಲ್ಪಿಸಿ ಹಳ್ಳಿಗಳಿಗೆ ಓಡಾಡುವ ಜನರಿಗೆ ಹಾಗೂ ವಾಹನಗಳಿಗೆ ದಾರಿದೀಪವಾಗಬೇಕು ಎಂದು ಸಮಾಜ ಸೇವಕ ರಾಘವೇಂದ್ರ ಗುಡಗುಡಿ ತಿಳಿಸಿದ್ದಾರೆ.