ತಾಲೂಕು ಹಾಗೂ ಜಿಲ್ಲೆಯಲ್ಲಿ ನಡೆದ ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬ್ಯಾಡಗಿ ಪೊಲೀಸರು, ಬೈಕ್ ಕಳ್ಳನನ್ನು ಬಂಧಿಸಿ ಆತನಿಂದ ಸುಮಾರು 4 ಲಕ್ಷ ಮೌಲ್ಯದ 9 ಮೋಟರ್ ಸೈಕಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಡಗಿ: ತಾಲೂಕು ಹಾಗೂ ಜಿಲ್ಲೆಯಲ್ಲಿ ನಡೆದ ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬ್ಯಾಡಗಿ ಪೊಲೀಸರು, ಬೈಕ್ ಕಳ್ಳನನ್ನು ಬಂಧಿಸಿ ಆತನಿಂದ ಸುಮಾರು 4 ಲಕ್ಷ ಮೌಲ್ಯದ 9 ಮೋಟರ್ ಸೈಕಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ.12ರಂದು ಮೋಟರ್ ಸೈಕಲ್ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ ಹಾಗೂ ಹಾವೇರಿ ಉಪವಿಭಾಗದ ಡಿವೈಎಸ್ಪಿ ಗಿರಿಮಲ್ಲಪ್ಪ ತಳಕಟ್ಟಿ ಅವರ ಮಾರ್ಗದರ್ಶನದಲ್ಲಿ, ಬ್ಯಾಡಗಿ ಸಿಪಿಐ ಎಂ.ಬಿ. ಚಿಕ್ಕಣ್ಣನವರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.ಬ್ಯಾಡಗಿ ಪಿಎಸ್ಐ ಭಾರತಿ ಕುರಿ ನೇತೃತ್ವದ ತಂಡವು ತನಿಖೆ ಕೈಗೊಂಡಿದ್ದು, ಜಿಲ್ಲಾ ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ ಹಾಗೂ ಸತೀಶ ಮಾರಿಕಟ್ಟಿ ಅವರು ನೀಡಿದ ತಾಂತ್ರಿಕ ಸುಳಿವಿನ ಆಧಾರದ ಮೇಲೆ ನ.21ರಂದು ದೇವಿಹೊಸೂರು ಗ್ರಾಮದ ಪ್ರಶಾಂತ ಶೇಖಪ್ಪ ಬ್ಯಾಡಗಿ (24) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
9 ಮೋಟರ್ ಸೈಕಲ್ ಜಪ್ತಿ: ಆರೋಪಿಯ ವಿಚಾರಣೆ ನಡೆಸಿದಾಗ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರ ಣಗಳು, ಹಾವೇರಿ ಶಹರ ಪೊಲೀಸ್ ಠಾಣೆಯ ಒಂದು ಪ್ರಕರಣ, ಆಡೂರು ಪೊಲೀಸ್ ಠಾಣೆಯ ಒಂದು ಪ್ರಕರಣ ಹಾಗೂ ಹುಲಗೂರ ಪೊಲೀಸ್ ಠಾಣೆಯ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 9 ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳು ಪತ್ತೆ ಯಾಗಿವೆ. ಬಂಧಿತ ಆರೋಪಿಯಿಂದ ಅಂದಾಜು 4 ಲಕ್ಷ ಮೌಲ್ಯದ 9 ಮೋಟರ್ ಸೈಕಲ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಕಾರ್ಯಾಚರಣೆಯಲ್ಲಿ ಪಿಎಸ್ಐ ಭಾರತಿ ಕುರಿ ಅವರೊಂದಿಗೆ ಪೊಲೀಸ್ ಸಿಬ್ಬಂದಿಗಳಾದ ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರ, ಹಿದಾಯತ್ ದೊಡ್ಡಮುಲ್ಲಾ, ರಘು ಕಾಟೇನಹಳ್ಳಿ, ಮಂಜುನಾಥ ಮುಚ್ಚಟ್ಟಿ, ಅಶೋಕ ಹರಮಗಟ್ಟಿ, ಸಂತೋಷ ಭಂಗಿ, ರಣದಪ್ಪ ಹಾಗೂ ಚಂದ್ರು ಸೋಮನಕಟ್ಟಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.