ಸಾರಾಂಶ
ರಾಯಚೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ತೀವ್ರ ಬರಗಾಲದ ಸಂಕಷ್ಟದಲ್ಲಿಯೂ ಸಹ ಹಿಂಗಾರಿನಲ್ಲಿ ಬೆಳೆದ ಅಲ್ಪ-ಸ್ವಲ ಬೆಳೆಗಳು ಕೈ ಸೇರಿದ್ದರಿಂದ ರೈತರು ಸುಗ್ಗಿ ಹಬ್ಬವನ್ನು ಸಂತಸದಿಂದ ಆಚರಿಸಿದರು.ಮಾನ್ವಿ, ಸಿರವಾರ, ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿಂಧನೂರು ತಾಲೂಕು ಕೇಂದ್ರ, ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮಕರ ಸಂಕ್ರಾಂತಿ ಸಂಭ್ರಮವು ಎದ್ದು ಕಂಡಿತು.
ದಕ್ಷಿಣಾಯಣ ಕಳೆದು ಉತ್ತರಾಯಣದ ಮೊದಲ ದಿನವಾದ ಸಂಕ್ರಮಣ ಪವಿತ್ರ ದಿನದಂದು ಕುಟುಂಬಸ್ಥರೊಂದಿಗೆ ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡಿ ನಾನಾ ಧಾರ್ಮಿಕ ಕ್ಷೇತ್ರ, ಗುಡಿ-ಗುಂಡಾರಗಳಿಗೆ ತೆರಳಿ ಪೂಜೆ ಸಲ್ಲಿಸಿ, ಕುಟುಂಬಸ್ಥರೊಂದಿಗೆ ಹಬ್ಬದೂಟವನ್ನು ಸವಿದರು. ಇನ್ನು ಕೆಲವೆಡೆ ಹಬ್ಬದ ದಿನ ಗ್ರಾಮೀಣ ಕ್ರೀಡೆಗಳು ನಡೆದವು, ಮಕ್ಕಳು, ಯುವಕರು ಸಹ ಗಾಳಿಪಟ ಹಾರಿಸಿ ಸಂಭ್ರಮಿಸಿದರು.ಮಳೆ ಕೊರತೆ-ಬರಗಾಲ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರು ಸಹ ಸಾರ್ವಜನಿಕರು ಸಂಕ್ರಮಣದ ವೇಳೆ ಪುಣ್ಯಸ್ನಾನಗೈದರು. ತುಂಗಭದ್ರಾ ತಟದ ವ್ಯಾಪ್ತಿಗೆ ಬರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ, ಎಲೆ ಬಿಚ್ಚಾಲಿಯ ಜಪದಕಟ್ಟೆ, ಪಂಚಮುಖಿ ಗಾಣಧಾಳ, ಮಾನ್ವಿಯ ಚೀಕಲಪರ್ವಿಯ ವಿಜಯದಾಸರ ಕಟ್ಟೆ,ಸಿಂಧನೂರಿನ ಅದೇ ರೀತಿ ಕೃಷ್ಣಾ ನದಿ ತಟದ ವ್ಯಾಪ್ತಿಯ ರಾಯಚೂರು ತಾಲೂಕಿನ ದೇವಸುಗೂರು, ಕುರುವಪುರ, ನಾರದಗಡ್ಡೆ, ಎಲೆ ಬಿಚ್ಚಾಲಿ, ದೇವದುರ್ಗ ತಾಲೂಕಿನ ಗೂಗಲ್ ಪ್ರಭುಸ್ವಾಮಿ, ಕೃಷ್ಣಾ, ಕೊಪ್ಪರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಅಣೆಮಲ್ಲೇಶ್ವರ ಗುಡಿ ಸೇರಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಜನರು ಪುಣ್ಯಸ್ನಾನ ಮಾಡಿದ್ದು ಕಂಡು ಬಂತು. ಉಭಯ ನದಿಗಳಿಗೆ ತಂಡೋಪತಂಡವಾಗಿ ಆಗಮಿಸಿದ ಜನ ನದಿಯಲ್ಲಿ ಮಿಂದು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಮಂತ್ರಾಲಯಕ್ಕೆ ಹರಿದು ಬಂದ ಭಕ್ತರು: ಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಸುಕ್ಷೇತ್ರ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು.ವಾರದ ರಜೆ ಹಾಗೂ ಹಬ್ಬದ ರಜೆ ಹಿನ್ನೆಲೆಯಲ್ಲಿ ರಾಜ್ಯ ಸೇರಿ ದೇಶದ ವಿವಿಧ ಪ್ರದೇಶಗಳಿಂದ ಕುಟುಂಬ ಸಮೇತರಾಗಿ ಸುಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಸಂಕ್ರಮಣ ಸ್ನಾನ ಮಾಡಿ, ನಂತರ ಗುರುಸಾರ್ವಭೌಮರ ಮೂಲಬೃಂದಾವನದ ದರ್ಶನ ಪಡೆದು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.