ತಾಲೂಕಿನ ಚಿಕ್ಕತೊಟ್ಲುಕೆರೆಯ ಶ್ರೀ ಅಟವೀ ಸುಕ್ಷೇತ್ರದಲ್ಲಿ ಇದೇ 15 ರಂದು ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದ ಜಾತ್ರಾಮಹೋತ್ಸವ ಹಾಗೂ ಲಿಂಗೈಕ್ಯ ಅಟವೀ ಸಿದ್ಧಲಿಂಗ ಸ್ವಾಮಿಗಳ 76ನೇ ಪುಣ್ಯ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುತಾಲೂಕಿನ ಚಿಕ್ಕತೊಟ್ಲುಕೆರೆಯ ಶ್ರೀ ಅಟವೀ ಸುಕ್ಷೇತ್ರದಲ್ಲಿ ಇದೇ 15 ರಂದು ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದ ಜಾತ್ರಾಮಹೋತ್ಸವ ಹಾಗೂ ಲಿಂಗೈಕ್ಯ ಅಟವೀ ಸಿದ್ಧಲಿಂಗ ಸ್ವಾಮಿಗಳ 76ನೇ ಪುಣ್ಯ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ನಗರದ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಅಟವೀ ಕ್ಷೇತ್ರದ ಶಿವಲಿಂಗ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಅಂದು ಬೆಳಿಗ್ಗೆ ೬.೩೦ರಿಂದ ಓಂಕಾರೇಶ್ವರ ಮಹಾಶಿವಯೋಗಿಗಳು, ಜಡೆಶಾಂತ ಬಸವ ಮಹಾಶಿವಯೋಗಿಗಳು, ಅಟವೀ ಮಹಾಶಿವಯೋಗಿಗಳು, ಅಟವೀ ಸಿದ್ಧಲಿಂಗ ಮಹಾಸ್ವಾಮಿಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30ಕ್ಕೆ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸುಮಂಗಲೆಯರ ಕಳಸ ಕನ್ನಡಿ ಆರತಿಯೊಂದಿಗೆ ಓಂಕಾರ ಶಿವಯೋಗಿಗಳವರ ಹಾಗೂ ಅಟವೀ ಮಹಾಶಿವಯೋಗಿಗಳ ಉತ್ಸವವು ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಅಟವೀ ಮಠಕ್ಕೆ ತಲುಪಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಷಟ್‌ಸ್ಥಳ ಧ್ವಜಾರೋಹಣ ಹಾಗೂ ನಂದಿ ಧ್ವಜಾರೋಹಣ, ಆನಂತರ ಶ್ರೀಗುರು ಅಟವೀಶ್ವರರ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದು ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಸಂಕ್ರಾಂತಿ ಜಾತ್ರೆಗಳ ಹೆಬ್ಬಾಗಿಲು, ಸುಗ್ಗಿ ಮುಗಿದು ರೈತರು ಬಿಡುವಾಗಿ ತಮ್ಮ ದುಡಿಮೆಯನ್ನು ಸಾರ್ಥಕಗೊಳಿಸಿಕೊಳ್ಳಲು ಜಾತ್ರಾ ಮಹೋತ್ಸವಗಳನ್ನು ಆಯೋಜಿಸುತ್ತಾರೆ. ಮಕರ ಸಂಕ್ರಾಂತಿಯಂದೇ ಅಟವೀ ಮಠದಲ್ಲಿ ಜಾತ್ರೆ ನಡೆಯುವುದು ನಮ್ಮ ಹೆಮ್ಮೆ. ಈ ಜಾತ್ರೆಯಲ್ಲಿ ಕೋರಾ ಹೋಬಳಿಯ ಹಳ್ಳಿಗಳ ಭಕ್ತರು ಪಾಲ್ಗೊಂಡು ವಿಶೇಷವಾಗಿ ಆಚರಿಸುವರು ಎಂದರು. ಅಟವೀ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿಗಳು ಮಂಗಳವಾರ ಮೌನಾಚರಣೆಯಲ್ಲಿದ್ದ ಕಾರಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದೂ ಮಾತನಾಡಲಿಲ್ಲ. ಅಟವಿ ಸುಕ್ಷೇತ್ರದ ಕಾರ್ಯಾಧ್ಯಕ್ಷ ಟಿ.ಬಿ.ಶೇಖರ್. ಖಜಾಂಚಿ ಜಗದೀಶ್ಚಂದ್ರ, ಅಟವೀ ಜ್ಞಾನ ಪ್ರಸಾರ ಕೇಂದ್ರದ ಸಂಚಾಲಕ ಕೆ.ವಿ.ಬೆಟ್ಟಯ್ಯ, ಮುಖಂಡರಾದ ಮಹದೇವಪ್ಪ, ವಿಶ್ವನಾಥ್ ಅಪ್ಪಾಜಪ್ಪ, ಬೆಟ್ಟಲಿಂಗಯ್ಯ, ಅನುಸೂಯಮ್ಮ, ಭೀಮರಾಜು ಮೊದಲಾದವರು ಭಾಗವಹಿಸಿದ್ದರು.