ಸಾರಾಂಶ
ಕಾರವಾರ: ಯುವ ಜನತೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು, ವಿದ್ಯಾರ್ಥಿ ಜೀವನದಿಂದಲೇ ದುಶ್ಚಟಗಳಿಂದ ದೂರವಿರುತ್ತೇವೆ ಎಂದು ದೃಢ ನಿರ್ಧಾರ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಅವರು ಶುಕ್ರವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ.ಮಹಾಂತ ಶಿವಯೋಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಯುವ ಜನತೆ ದುಶ್ಚಟಗಳು ಹಾಗೂ ದುರ್ವ್ಯಸನಗಳಿಗೆ ಒಳಗಾಗಿ ಮಾನಸಿಕ ಖಿನ್ನತೆಯಿಂದ ತಮ್ಮ ಪೂರ್ತಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಆರೋಗ್ಯವಂತ ಸಮಾಜಕ್ಕೆ ಇದು ಮಾರಕವಾಗಿದೆ ಎಂದರು.
ಯುವ ಜನತೆ ಸೋಷಿಯಲ್ ಮೀಡಿಯಾಗಳ ಬಳಕೆಯ ಒಬ್ಬಂಟಿತನದಿಂದ ಹೊರಬಂದು, ಸಮಾಜಮುಖಿಯಾಗಿ, ಜನರೊಂದಿಗೆ ಬೇರೆಯಬೇಕು. ಕುಟುಂಬದ ಜೊತೆ ಸಮಯ ಕಳೆಯಬೇಕು. ಯುವ ಜನತೆಯ ಮೇಲೆ ಬಹಳಷ್ಟು ಜವಾಬ್ದಾರಿ ಇದ್ದು, ಇದನ್ನು ಅರಿತು, ತಮ್ಮ ಜೀವನ ರೂಪಿಸಿಕೊಳ್ಳುವ ಕಡೆ ಗಮನ ನೀಡಬೇಕು ಎಂದರು.ವಿಶೇಷ ಉಪನ್ಯಾಸ ನೀಡಿದ ಕ್ರಿಮ್ಸ್ ಮನೋ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಅಕ್ಷಯ ಪಾಟಕ್, ವ್ಯಸನವು ಕೇವಲ ದೈಹಿಕವಾದ ಚಟವಲ್ಲ; ಅದು ಮೆದುಳಿನ ಕಾಯಿಲೆಯಾಗಿದೆ. ಯುವ ಜನತೆ ದುಶ್ಚಟವೆಂಬ ಮಾಯಾವಿ ಕಾಯಿಲೆಗೆ ಬೇಗ ಸೆಳೆಯಲ್ಪಡುತ್ತಾರೆ. ಈ ಜಾಲದಲ್ಲಿ ಬಂಧಿಯಾದ ನಂತರ ಅದು ಅವರ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತದೆ. ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕು, ಕುಟುಂಬ ಮಾತ್ರವಲ್ಲದೇ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ದುಶ್ಚಟಗಳಿಂದ ದೂರ ಇರುವಂತೆ ತಿಳಿಸಿದರು.
ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರವೀಂದ್ರ ಬಿರಾದಾರ, ಯುವಕರು ಹೆಚ್ಚಾಗಿ ವ್ಯಸನಗಳಿಗೆ ಬಲಿಯಾಗುತ್ತಾರೆ. ಚಿಕ್ಕ ಚಿಕ್ಕ ಚಟಗಳು ವ್ಯಸನಗಳಾಗಿ ಮಾರ್ಪಾಡಾಗುತ್ತದೆ. ವಿದ್ಯಾರ್ಥಿಗಳು ಇಂತಹ ಚಟಗಳಿಂದ ದೂರವಿರಬೇಕು ಎಂದರು.ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ ಎಸ್. ಪತ್ರೆಕರ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ ನಾಯ್ಕ ಮಾದಕ ವಸ್ತು ವಿರೋಧಿ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್ ಇದ್ದರು.
ಕಾರ್ಯಕ್ರಮದಲ್ಲಿ ದುಶ್ಚಟಗಳಿಗೆ ಒಳಗಾಗಿ ನಂತರ ವ್ಯಸನ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವ ವ್ಯಸನ ಮುಕ್ತರನ್ನು ಸನ್ಮಾನಿಸಲಾಯಿತು. ವನಿತಾ ಶೇಟ್ ನಿರೂಪಿಸಿದರು. ಉಪನ್ಯಾಸಕಿ ಪೂಜಾ ಸ್ವಾಗತಿಸಿ, ವಂದಿಸಿದರು.