ಸಾರಾಂಶ
ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕಾರಟಗಿಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಅದಕ್ಕಾಗಿ ಪ್ರತಿಯೊಬ್ಬರು ತಾಯಿಯ ಹೆಸರಿನಲ್ಲಿ ಒಂದು ಸಸಿಗಳನ್ನು ನೆಡುವ ಸಂಕಲ್ಪ ಮಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೆ.ಬಿ. ಸೈಯದ್ ಹೇಳಿದರು.
ತಾಲೂಕಿನ ಸೋಮನಾಳ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಪಂಚಾಯಿತಿ, ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಮೈಲಾಪುರ ಗ್ರಾಪಂ ಸಹಯೋಗದಲ್ಲಿ ಗುರುವಾರ ನಡೆದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ದೇಶದ ಪ್ರಧಾನ ಮಂತ್ರಿ ಪ್ರತಿಯೊಬ್ಬರೂ ಪರಿಸರ ಬೆಳೆಸಿ, ಸಂರಕ್ಷಣೆ ಮಾಡುವ ಉದ್ದೇಶದಿಂದ ಪರಿಸರ ದಿನದ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿನ್ನೆಲೆ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ನೆಡುವ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ. ಬರೀ ಕಾರ್ಯಕ್ರಮಗಳ ಮಾಡಿ ಸಸಿ ನೆಟ್ಟರೆ ಸಾಲದು ಅವುಗಳನ್ನು ಪೋಷಿಸಿ ಬೆಳೆಸಿ ದೊಡ್ಡ ಮರಗಳನ್ನಾಗಿ ಮಾಡಬೇಕು. ನಾವೆಲ್ಲರೂ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಸಾಮಾಜಿಕ ವಲಯ ಅರಣ್ಯ ಇಲಾಖೆಯ ಗಸ್ತು ಪಾಲಕ ಶಿವಶರಣ ಕೋಳಿ ಮಾತನಾಡಿ, ದಿನೇ ದಿನೇ ಪರಿಸರ ನಾಶವಾಗಿ ತಾಪಮಾನ ಏರಿಕೆಯಂಥ ನಾನಾ ಸಮಸ್ಯೆ ಎದುರಿಸುತ್ತಿದ್ದೇವೆ. ಹಾಗಾಗಿ ಭೂಮಿ ತಾಯಿಯನ್ನು ಕಾಪಾಡುವುದು ಅತಿ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಸುಂದರವಾದ ಪರಿಸರ ಉಳಿಸುವ ಬಗ್ಗೆ ಯೋಚಿಸಬೇಕು. ಇದಕ್ಕೆಲ್ಲ ಸಸಿ ನೆಡುವುದೊಂದೇ ಪರಿಹಾರವಾಗಿದೆ ಎಂದರು.ಈ ವೇಳೆ ಗ್ರಾಪಂ ಕಾರ್ಯದರ್ಶಿ ಸಂದೀಪ್, ತಾಪಂ ಐಇಸಿ ಸಂಯೋಜಕ ಸೋಮನಾಥ ಗೌಡರ್, ಗ್ರಾಮದ ಬಸವರಾಜ್ ತಳವಾರ, ರಾಜಪ್ಪ ಭಾವಿಕಟ್ಟಿ, ಶಾಲಾ ಮುಖ್ಯಗುರು ಬೆಟ್ಟದಪ್ಪ ಕುಂಬಾರ್, ಶಿಕ್ಷಕರಾದ ರಮೇಶ್ ಖ್ಯಾಡೇದ್, ಲಿಂಗರಾಜ್, ನಾಗರಾಜ್ ಸೇರಿ ನರೇಗಾ ಕೂಲಿಕಾರರು ಇದ್ದರು.