ಸಾರಾಂಶ
ನವಲಗುಂದ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದರೂ ರಾಜೀನಾಮೆ ನೀಡದೆ ಮೊಂಡತನ ತೋರುತ್ತಿದ್ದಾರೆ. ಈ ಸರ್ಕಾರದಲ್ಲಿ ನಿತ್ಯವೂ ಒಂದೊಂದು ಹಗರಣ ಬೆಳಕಿಗೆ ಬರುತ್ತಿವೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಆರೋಪಿಸಿದರು.ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಖಂಡರ ಹೇಳಿಕೆ, ಮುಖ್ಯಮಂತ್ರಿ ರಾಜೀನಾಮೆ ಹಾಗೂ ನವಲಗುಂದ ಪಟ್ಟಣದ ಐತಿಹಾಸಿಕ ಗುಡ್ಡದ ಮಣ್ಣು ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಾರಂಪರಿಕ ನವಲಗುಂದ ಗುಡ್ಡ ಉಳಿಸುವಂತೆ ರೈತರು, ಯುವಕರು, ಮಹಿಳೆಯರು, ಹೋರಾಟಗಾರರು ಮನವಿ ಮಾಡಿದ್ದಾರೆ. ಅವರೊಂದಿಗೆ ಬಿಜೆಪಿ ಕಾರ್ಯಕರ್ತರಿದ್ದು ಯಾವುದೇ ಕಾರಣಕ್ಕೂ ಗುಡ್ಡದ ಮಣ್ಣು ಅಗೆಯಲು ಬಿಡುವುದಿಲ್ಲ. ಈಗಾಗಲೇ 3000ಕ್ಕೂ ಅಧಿಕ ಟ್ರಿಪ್‌ನಷ್ಟು ಮಣ್ಣು ಅಗೆದಿದ್ದು ಯಾವ ಕಾಮಗಾರಿಗೆ ಬಳಸಲಾಗಿದೆ ಎಂಬ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಗುಡ್ಡದ ಮಣ್ಣು ಅಗೆತದಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದ್ದು ಇದರ ಸಮಗ್ರ ತನಿಖೆ ಆಗುವವರೆಗೂ ಹೋರಾಟ ನಿಲ್ಲದು ಎಂದಿರುವ ಮುನೇನಕೊಪ್ಪ, ಆ. 26ರಂದು ನಡೆಯುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಗುಡ್ಡ ಅಗೆಯಲು ಠರಾವು ಪಾಸ್ ಮಾಡಿದರೆ ಗುಡ್ಡದಲ್ಲಿಯೇ ಕುಳಿತು ಅದರ ರಕ್ಷಣೆಗೆ ಹೋರಾಟ ನಡೆಸಲಾಗುವುದು ಎಂದು ಈಗಾಗಲೇ ಅಧಿಕಾರಿಗಳಿಗೆ ಹೇಳಿದ್ದೇವೆ. ಈ ಹಗರಣದಲ್ಲಿ ಭಾಗಿಯಾದ ಅಧಿಕಾರಿ ಹಾಗೂ ವ್ಯಕ್ಯಿ ಎಷ್ಟೇ ಪ್ರಭಾವಿಯಾಗಿದ್ದರೂ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಾಸಕ ಸ್ಥಾನಕ್ಕೆ ಗೌರವ ನೀಡಿ:ಶಾಸಕ ಸ್ಥಾನವು ಗೌರವದಿಂದ ಕೂಡಿದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಶಾಸಕ ಸ್ಥಾನ ಶಾಶ್ವತವಲ್ಲ. ಕ್ಷೇತ್ರಕ್ಕೆ ಅನುದಾನ ತಂದು ಕೆಲಸ ಮಾಡಿದಾಗ ಹೆಸರು ಉಳಿಯುತ್ತದೆ. ಎಲ್ಲ ಇಲಾಖೆಗಳ ಅನುದಾನವನ್ನು ಕೇವಲ ಚಕ್ಕಡಿ ರಸ್ತೆ ಹೆಸರಿನಲ್ಲಿ ಬಳಕೆ ಮಾಡಬಾರದು. ಇದಕ್ಕೆ ವಿಶೇಷ ಅನುದಾನ ತರಲಿ ಎಂದು ಪರೋಕ್ಷವಾಗಿ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಹೇಳಿದ ಮುನೇನಕೊಪ್ಪ, ಗುಡ್ಡದ ಮೇಲೆ ಪ್ರೀತಿ ಇದ್ದಿದ್ದರೆ ಶಾಸಕರು ಅದರ ಮಣ್ಣು ಬಳಸುತ್ತಿರಲಿಲ್ಲ ಎಂದರು.
ಮುಖಂಡ ರಾಯನಗೌಡ ಪಾಟೀಲ ಮಾತನಾಡಿ, ಮುಡಾ ಹಾಗೂ ವಾಲ್ಮೀಕಿ ಹಗರಣದ ರೀತಿಯಲ್ಲಿ ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳ ಹಗರಣ ನಡೆದಿದೆ. ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಗುಡ್ಡದ ಮಣ್ಣು ಅಗೆಯಲಾಗಿದೆ ಎಂದು ಆರೋಪಿಸಿದರು.ಎ.ಬಿ. ಹಿರೇಮಠ ಹಾಗೂ ಅಡಿವೆಪ್ಪ ಮನಮಿ ಮಾತನಾಡಿ, ಪಟ್ಟಣದ ಗುಡ್ಡ ಹಾಗೂ ತಿರ್ಲಾಪುರದ ನೀರಾವರಿ ಕ್ವಾರಿಗೆ ಕೈ ಹಾಕಿದರೂ ಹೋರಾಟ ನಡೆಸಲು ಸಿದ್ಧರಿದ್ದೇವೆ. ಪ್ರತಿ ಗ್ರಾಮ ಹಾಗೂ ಪಟ್ಟಣದ ಮನೆಗಳಿಂದ ಒಬ್ಬ ಯುವಕರಂತೆ ಸಂಘಟಿಸಿ ನವಲಗುಂದ ಗುಡ್ಡ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಎಸ್.ಬಿ. ದಾನಪ್ಪಗೌಡ, ಮೃತ್ಯುಂಜಯ ಹಿರೇಮಠ, ಸಿದ್ದಣ್ಣ ಕಿಟಗೇರಿ, ಮಾಂತೇಶ ಕಲಾಲ, ಷಣ್ಮುಖ ಗುರಿಕಾರ, ರಾಜಶೇಖರ ಕಂಪ್ಲಿ, ರೋಹಿತ ಮತ್ತೆಹಳ್ಳಿ, ಶಂಕರಗೌಡ ರಾಯನಗೌಡ, ಮಲ್ಲಿಕಾರ್ಜುನ ಸಂಕನಗೌಡ್ರ, ಆನಂದ ಜಕ್ಕನಗೌಡ್ರ, ರುದ್ರಪ್ಪ ದುಂದೂರ, ಸೋಮು ಪಟ್ಟಣಶೆಟ್ಟಿ, ಗುರುಪ್ರಸಾದ ಶಿರೂರ, ಶರಣಪ್ಪ ಹಕ್ಕರಕಿ, ಬಸವರಾಜ ಕಟ್ಟಿಮನಿ, ಜ್ಯೋತಿ ಗೊಲ್ಲರ, ಶಂಕರಗೌಡ ಬಾಳನಗೌಡ್ರ, ದೇವರಾಜ ಕರಿಯಪ್ಪನವರ, ಜಯಪ್ರಕಾಶ ಬಾದಾಮಿ, ಸಂತೋಷ ನಾವಳ್ಳಿ, ವಿನಾಯಕ ದಾಡಿಬಾವಿ, ಬಸವರಾಜ ಕಾತರಕಿ, ಅರುಣ ಮೇಣಸಿನಕಾಯಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.