ಸಾರಾಂಶ
ಅರಣ್ಯ ಇಲಾಖೆಯವರು ರೈತರಿಗೆ ಅನಾವಶ್ಯಕ ಕಿರುಕುಳ ನೀಡುವುದನ್ನು ನಿಲ್ಲಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ತರೀಕೆರೆಅರಣ್ಯ ಇಲಾಖೆಯವರು ರೈತರಿಗೆ ಅನಾವಶ್ಯಕವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸದಿದ್ದರೆ ರೈತರ ಹಿತರಕ್ಷಣೆಗೆ ಅರಣ್ಯ ಇಲಾಖೆ ವಿರುದ್ಧ ಜನಾಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅರಣ್ಯ ಇಲಾಖೆಗೆ ಸಂಬಂಧಪಡದ ಜಮೀನಿಗೆ ರೈತರು ಸ್ವಾಧೀನ ದಲ್ಲಿರುವ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿದ್ದು, ಈಗಾಗಲೇ ಆ ಸ್ಥಳಗಳಲ್ಲಿ ಮನೆ ಕಟ್ಟಿಕೊಂಡು ಬದುಕುತ್ತಿದ್ದು ಇಂತಹ ಪ್ರದೇಶಗಳಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿ ತೊಂದರೆ ಕೊಡುತ್ತಿರುವುದು ಅಕ್ಷಮ್ಯ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಭೀಮಣ್ಣ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನಮ್ಮ ಪಕ್ಷದಿಂದ ಪತ್ರ ಬರೆಯುತ್ತೇವೆ. ರೈತರಿಗೆ ತೊಂದರೆಯಾದರೆ ಪಕ್ಷಭೇದ ಮರೆತು ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷ ಜನರ ನಡುವೆ ಬೆಳೆಯುತ್ತಿದೆ. ಇದರಿಂದ ವರ್ಷಕ್ಕೆ ಕನಿಷ್ಠ ವಿವಿಧ ಹಂತದ ಚುನಾವಣೆ ಬರುತ್ತಿದ್ದು, ಆ 3 ಪಕ್ಷಗಳು ಶ್ರೀಮಂತರನ್ನು ಮಾತ್ರ ಪರಿಗಣಿಸುತ್ತಿವೆ. ಆದರೆ ನಮ್ಮ ಪಕ್ಷ ಶ್ರೀ ಸಾಮಾನ್ಯರಿಗೂ ಅವಕಾಶ ನೀಡಿ ಅಧಿಕಾರಕ್ಕೆ ತಂದಿರುವುದು ದೆಹಲಿ, ಪಂಜಾಬ್ ಮತ್ತಿತರೆ ರಾಜ್ಯಗಳಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ರಾಜ್ಯದ್ಯಂತ ಸಂಚರಿಸಿ ಪಕ್ಷ ಕಟ್ಟುತ್ತೇವೆ ಎಂದು ಹೇಳಿದರು.ದೇಶದಲ್ಲಿ ಬಿಜೆಪಿ ಸರ್ವಾಧಿಕಾರಿ ಪ್ರವೃತ್ತಿಯಿಂದ ಎಲ್ಲಾ ಪಕ್ಷಗಳನ್ನು ಮುಗಿಸುವ ತಂತ್ರಗಾರಿಕೆ ಮಾಡುತ್ತಿದೆ. ನ್ಯಾಯಾಂಗ, ಸಿಬಿಐ ಮತ್ತಿತರ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮ ಪಕ್ಷದ ನಾಯಕ ಕೇಜ್ರಿವಾಲ್ ಸೇರದಂತೆ ಹಲವರ ಮೇಲೆ ಸುಳ್ಳು ಕೇಸು ಹಾಕಿ ಬಂಧಿಸುತ್ತಿದ್ದಾರೆ. ಅದರಂತೆ ರಾಜ್ಯದಲ್ಲೂ ರಾಜ್ಯಪಾಲರ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಲೋಕಾಯುಕ್ತ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವರ ಮೇಲೆ ಕ್ರಮ ಜರುಗಿಸಲು ಅನುಮತಿ ಕೇಳಿದ್ದರೂ ಸಹ ರಾಜ್ಯಪಾಲರು ಅನುಮತಿ ನೀಡಿಲ್ಲ. ಅದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಿಚಾರಣೆ ನಡೆಸಲು ಕೋರಿದ ಮನವಿಗೆ ತಕ್ಷಣ ಅನುಮತಿ ನೀಡಿರುವುದರಲ್ಲಿ ಬಿಜೆಪಿ ಕೈವಾಡ ಇರುವುದು ತೋರುತ್ತದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಗದೀಶ್, ಹೇಮಂತ್, ಲಿಂಗಾರಾಧ್ಯ, ಸುರೇಶ್, ಶಿವಶಂಕರ್ನಾಯ್ಕ, ವೇದಮೂರ್ತಿ ಮತ್ತಿತರರು ಭಾಗವಹಿಸಿದ್ದರು.22ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಅಮ್ ಅದ್ಮಿ ಪಕ್ಷ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿ ಚಂದ್ರು ಪತ್ರಕರ್ತರೊಂದಿಗೆ ಮಾತನಾಡಿದರು.