ಊರಮ್ಮ ಉತ್ಸವದಲ್ಲಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿ: ಡಿಸಿ

| Published : Mar 06 2025, 12:33 AM IST

ಊರಮ್ಮ ಉತ್ಸವದಲ್ಲಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದೇವತೆ ಉತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಯಾವುದೆ ಕುಂದುಕೊರತೆ ಹಾಗೂ ತೊಂದರೆಗಳಾಗದಂತೆ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- ಹರಿಹರ ನಗರಸಭೆ ಸಭಾಂಗಣದಲ್ಲಿ ಅಭಿವೃದ್ಧಿ ಸಭೆ । 18ರಿಂದ 22ರವರೆಗೆ ಜಾತ್ರೆ । ರಾಜ್ಯ ಹೆದ್ದಾರಿ ಗುಂಡಿಗಳ ಮುಚ್ಚಲು ಸೂಚನೆ - - - ಕನ್ನಡಪ್ರಭ ವಾರ್ತೆ ಹರಿಹರ ಗ್ರಾಮದೇವತೆ ಉತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಯಾವುದೆ ಕುಂದುಕೊರತೆ ಹಾಗೂ ತೊಂದರೆಗಳಾಗದಂತೆ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಅಭಿವೃದ್ಧಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ.18ರಿಂದ 22ರವರೆಗೆ ಜಾತ್ರೆ ನಡೆಯಲಿದೆ. ಹರಿಹರ ನಗರದ ನಾಲ್ಕೂ ದಿಕ್ಕಿನಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿರುವ ಗುಂಡಿಗಳನ್ನು ಮುಚ್ಚಿ, ತಮಗೆ ಫೋಟೋಗಳನ್ನು ರವಾನಿಸಬೇಕೆಂದು ಪಿಡಬ್ಲ್ಯುಡಿ ಎಂಜಿನಿಯರ್‌ಗೆ ಸೂಚಿಸಿದರು.

ನಗರದಲ್ಲಿ ಕೆಟ್ಟಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಹೆಚ್ಚುವರಿ ನೀರಿನ ಟ್ಯಾಂಕರ್ ತರಿಸಬೇಕು. ಅಕ್ಕಪಕ್ಕದ ನಗರ, ಪಟ್ಟಣಗಳಿಂದ ಪೌರಕಾರ್ಮಿಕರನ್ನು ನಿಯುಕ್ತಿಗೊಳಿಸಬೇಕು. ಅಗ್ನಿಶಾಮಕ ವಾಹನ ಸದಾ ಸಿದ್ಧವಿರಬೇಕು. ಗ್ರಾಮದೇವತೆ ದೇವಸ್ಥಾನ ಹಾಗೂ ಚೌಕಿ ಮನೆ ಸೇರಿದಂತೆ ಮೆರವಣಿಗೆ ಸಾಗುವ ಜಾಗಗಳಲ್ಲಿ ಹೆಚ್ಚಿನ ಸ್ವಚ್ಛತೆ ಕೈಗೊಳ್ಳಬೇಕು. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಸೊಳ್ಳೆ ನಿವಾರಕ ಫಾಗಿಂಗ್ ಮಾಡಿಸಲು ನಗರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ನಗರಕ್ಕೆ ನೀರು ಪೂರೈಕೆ ಮಾಡುವ ಕವಲತ್ತು ಜಾಕ್‍ವೆಲ್‍ಗೆ ಹಾಗೂ ನಗರದಲ್ಲಿ ನಿರಂತರ ವಿದ್ಯುತ್ ಸರಬರಾಜು ನೀಡಬೇಕು. ಕೆಟ್ಟಿರುವ ಪರಿವರ್ತಕ, ಕೇಬಲ್‍ಗಳನ್ನು ದುರಸ್ತಿ ಮಾಡಿಕೊಳ್ಳಿ. ವಿದ್ಯುತ್ ಅವಘಡಗಳು ನಡೆದರೆ ನಿಮ್ಮನ್ನೆ ಹೊಣೆಯಾಗಿಸುವುದಾಗಿ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರ ಪ್ರವೇಶಿಸುವ ನಾಲ್ಕೂ ದಿಕ್ಕಿನಲ್ಲಿ ಹೊರವಲಯದಲ್ಲೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿ, ಟ್ರಾಫಿಕ್ ಜಾಮ್ ಆಗದಂತೆ ಬ್ಯಾರೀಕೇಡ್ ಅಳವಡಿಸಬೇಕು. ಮಫ್ತಿ ವೇಷದಲ್ಲೂ ಸಿಬ್ಬಂದಿ ನಿಯೋಜನೆ ಮಾಡಿ. ಅಪರಾಧಿಕ ಚಟುವಟಿಕೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ನಗರ ಠಾಣೆ ಇನ್‌ಸ್ಪೆಕ್ಟರ್‌ ದೇವಾನಂದ್‍ ಅವರು ಕೈಗೊಳ್ಳಬೇಕು ಎಂದರು.

ತಿಂಗಳಿಗೊಮ್ಮೆ ಅಭಿವೃದ್ಧಿ ಸಭೆ:

ನಗರಸಭಾ ಸದಸ್ಯೆ ಲಕ್ಷ್ಮೀ ಮೋಹನ್ ಡಿ. ಅವರು ಫ್ಲೆಕ್ಸ್ ಹಾವಳಿ ಕುರಿತು ಸಭೆಯಲ್ಲಿ ಗಮನ ಸೆಳೆದಾಗ, ಸ್ಪಂದಿಸಿದ ಡಿಸಿ ಅವರು, ಅನಧಿಕೃತ ಫ್ಲೆಕ್ಸ್‌, ಬೋರ್ಡ್ ಅಳವಡಿಸುವವರ ವಿರುದ್ಧ ಕೇಸು ದಾಖಲಿಸಬೇಕು. ಫ್ಲೆಕ್ಸ್ ಆಳವಡಿಸುವವರು, ಕಡ್ಡಾಯವಾಗಿ ನಗರಸಭೆಗೆ ನಿಗದಿತ ಶುಲ್ಕ ಪಾವತಿಸಿ, ಅನುಮತಿ ಪಡೆಯಬೇಕು. ಇಲ್ಲದಿದ್ದರೆ, ಎಫ್‍ಐಆರ್ ದಾಖಲಿಸುವಂತೆ ಖಡಕ್ ಸೂಚನೆ ನೀಡಿದರು. ತಿಂಗಳಿಗೊಮ್ಮೆ ನಗರದಲ್ಲಿ ನಗರಸಭೆಯಲ್ಲಿ ಅಭಿವೃದ್ಧಿ ಸಭೆ ನಡೆಸಲಾಗುವುದು. ಮಾ.14ರಂದು ಬೆಳಗ್ಗೆ 7 ಗಂಟೆಗೆ ಹರಿಹರದಲ್ಲಿ ಸಂಚಾರ ನಡೆಸಿ, ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ, ಸದಸ್ಯರಾದ ಎ.ವಾಮನಮೂರ್ತಿ, ದಾದಾ ಖಲಂದರ್, ಆಟೋ ಹನುಮಂತಪ್ಪ, ಕೆ.ಬಿ.ರಾಜಶೇಖರ್, ಸೈಯದ್ ಅಬ್ದುಲ್ ಅಲೀಂ, ಎಂ.ಆರ್.ಮುಜಮ್ಮಿಲ್, ಎಸ್.ಎಂ.ವಸಂತ್, ವಿರೂಪಾಕ್ಷಪ್ಪ, ರಜನೀಕಾಂತ್, ನಾಗರತ್ನಮ್ಮ, ಉಷಾ ಮಂಜುನಾಥ್, ಸುಮಿತ್ರಾ ಮರಿದೇವ, ರತ್ನ ಉಜ್ಜೇಶ್, ಷಹಜಾದ್ ಸನಾಉಲ್ಲಾ, ಎಂ.ಎಸ್.ಬಾಬುಲಾಲ್, ಕೆ.ಜಿ.ಸಿದ್ದೇಶ್, ಇಬ್ರಾಹಿಂ, ಶಾಹೀನಾಬಾನು ಮಾತನಾಡಿದರು.

ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹಾಂತೇಶ್, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

- - -

ಕೋಟ್‌ ಮಾ.8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯುವ ಲೋಕ್ ಅದಾಲತ್‍ನಲ್ಲಿ ನಗರಸಭೆ ಸೇರಿದಂತೆ ವಿವಿಧ ಇಲಾಖೆಯವರು, ವಕೀಲರು, ಸಾರ್ವಜನಿಕರು ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

- - - -05ಎಚ್‍ಆರ್‍ಆರ್03.ಜೆಪಿಜಿ:

ಹರಿಹರದ ನಗರಸಭೆಯಲ್ಲಿ ನಡೆದ ಅಭಿವೃದ್ಧಿ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿದರು. ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಹಾಗೂ ಇತರರಿದ್ದರು.