ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಎಡಿಸಿ ಆರ್‌. ಐಶ್ವರ್ಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೀಟ್ ಪರೀಕ್ಷೆ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ನೀಟ್ ಪರೀಕ್ಷೆಯು ಜೂ. 21ರಂದು ಮೈಸೂರು ನಗರದಲ್ಲಿ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. 7886 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಎಂ.ಜಿ. ಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್, ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು,ಮಹಾರಾಣಿ ಮಹಿಳಾ ಕಲಾ ಕಾಲೇಜು, ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಒಂಟಿಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುವೆಂಪು ನಗರ ಸರ್ಕಾರಿ ಪದವಿಪೂರ್ವ ಕಾಲೇಜು, ಜಾಕಿ ಕ್ವಾಟ್ರಸ್ ಬಳಿ ಇರುವ ಸರ್ಕಾರಿ ಆದರ್ಶ ವಿದ್ಯಾಲಯ, ನಜರ್ಬಾದ್ ಹತ್ತಿರ ಇರುವ ವಿಭಜಿತ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಹಾಗೂ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಪರೀಕ್ಷೆ ನಡೆಯಲಿದೆ, ಸರ್ಕಾರಿ ಪದವಿಪೂರ್ವ ಕಾಲೇಜು ಅನಿಕೇತನ ರಸ್ತೆ ಕುವೆಂಪು ನಗರ ಮೈಸೂರು, ದೇವರಾಜ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜು ದೇವರಾಜ ಮೊಹಲ್ಲಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾರ್ಥ ಲೇಔಟ್ ಮೈಸೂರ್, ಡೆಮೋಸ್ಟ್ರೇಷನ್ ಸ್ಕೂಲ್ ಮೈಸೂರು ಇಲ್ಲಿ ಪರೀಕ್ಷೆ ನಡೆಯಲಿದೆ ಎಂದರು.


ನೀಟ್ ಪರೀಕ್ಷೆಯ ಕೋಆರ್ಡಿನೇಟರ್ ಮಿಥಿಲೇಶ್ ಕುಮಾರ್ ಅವರು ಮಾತನಾಡಿ, ಪರೀಕ್ಷೆಯು ಜೂ. 21 ರಂದು ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಯಿಂದ ಪರೀಕ್ಷಾರ್ಥಿಗಳ ಫ್ರಿಸ್ಕಿಂಗ್ ಹಾಗೂ ಬಯೋಮೆಟ್ರಿಕ್ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಧ್ಯಾಹ್ನ 1.30 ರೊಳಗೆ ಮಾತ್ರ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿರುತ್ತದೆ‌, ನಂತರ ಪ್ರವೇಶವಿರುವುದಿಲ್ಲ. ಪರೀಕ್ಷಾರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ 1 ಪೊಲೀಸ್ ವೃತ್ತ ನಿರೀಕ್ಷಕರು, 3 ಪುರುಷ ಮತ್ತು 2 ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲಾಗುವುದು ಎಂದರು.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶುಚಿತ್ವ ಕಾಪಾಡುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಮೈಸೂರು ನಗರಪಾಲಿಕೆ ಅಧಿಕಾರಿಗಳಿಗೆ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ವಿದ್ಯಾರ್ಥಿಗಳು -ಪರೀಕ್ಷೆಯನ್ನು ಬರೆಯುವಾಗ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಅಭ್ಯರ್ಥಿಗಳಿಗೆ ಚಿಕಿತ್ಸೆಯನ್ನು ನೀಡಲು ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆ.ಎಸ್.ಆರ್.ಟಿಸಿ ವತಿಯಿಂದ ಪರೀಕ್ಷಾ ದಿನದಂದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಕೇಂದ್ರದ ಮಾರ್ಗದಲ್ಲಿ ನಿಗಧಿತ ಸಮಯಕ್ಕೆ ತಲುಪುವಂತೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ನಡೆಯುವ ದಿನಗಳಂದು ನಿರಂತರ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲು ಚೆಸ್ಕಾಂ ಅಗತ್ಯ ಕ್ರಮವಹಿಸುವುದು. ಪರೀಕ್ಷಾ ದಿನಗಳಂದು ವಿಕಲಚೇತನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಕೇಂದ್ರಗಳಿಗೆ ವ್ಹೀಲ್ ಚೇರ್ ಮತ್ತು ಮೂಲಭೂತ ಅಗತ್ಯ ಕ್ರಮ ಒದಗಿಸುವಂತೆ ತಿಳಿಸಿದರು.

ಸಭೆಯಲ್ಲಿ ನೀಟ್ ಪರೀಕ್ಷೆಯ ಕೋ ಆರ್ಡಿನೇಟರ್ ಡಾ.ಎನ್.ಆರ್. ಶ್ರೀನಾಥ್, ಜಿಲ್ಲಾಧಿಕಾರಿ ಕಚೇರಿ ಶಿಷ್ಟಾಚಾರ ತಹಸೀಲ್ದಾರ್ ಶಿವಪ್ರಸಾದ್, ಅಗ್ನಿಶಾಮಕ ಅಧಿಕಾರಿ ಗುರುರಾಜ್ ಮೊದಲಾದವರು ಇದ್ದರು.