ಕೋವಿಡ್‌ ಸೋಂಕು ತಡೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ: ಶಾಸಕರ ಸೂಚನೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಕೋವಿಡ್‌ ಸೋಂಕು ತಡೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ: ಶಾಸಕರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋವಿಡ್‌ ಸೋಂಕು ತಡೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ: ಶಾಸಕರ ಸೂಚನೆಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರು, ಮಗುವಿಗೆ ಹಾಲುಣಿಸುವ ತಾಯಿ ಹೆಚ್ಚಿನ ಜನಸಂದಣಿ ಇರುವಲ್ಲಿ ಹೋಗಬಾರದು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೊಳಗಾಗಿ ವೈದ್ಯರ ಸಲಹೆ ಸೂಚನೆ ಪಾಲಿಸಬೇಕು

- ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ರೂಪಾಂತರ ತಳಿ ಜೆ.ಎನ್.1 ನಿಯಂತ್ರಣ-ಮುಂಜಾಗ್ರತಾ ಸಭೆಕನ್ನಡ ಪ್ರಭ ವಾರ್ತೆ, ಕೊಪ್ಪ

ಕೋವಿಡ್ -19 ಆರಂಭಿಕ ವರ್ಷದಲ್ಲಿ ಚೈನಾದಿಂದ ಕೋವಿಡ್ ವೈರಸ್ ಇತರೆ ದೇಶಗಳಿಗೂ ಲಗ್ಗೆ ಇಡಲಿದೆ ಎಂಬ ಸುದ್ಧಿ ತಿಳಿಯುತ್ತಿದ್ದಂತೆ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಶೃಂಗೇರಿ ಕ್ಷೇತ್ರದ ನ.ರಾ.ಪುರದಲ್ಲಿ ಕೋವಿಡ್ ಮುಂಜಾಗ್ರತಾ ಸಭೆ ನಡೆಸುವ ಮೂಲಕ ಕೋವಿಡ್ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಕೊಪ್ಪ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ರೂಪಾಂತರ ತಳಿ ಜೆ.ಎನ್.1 ನಿಯಂತ್ರಣ ಮತ್ತು ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿ, ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರು, ಮಗುವಿಗೆ ಹಾಲುಣಿಸುವ ತಾಯಿ ಹೆಚ್ಚಿನ ಜನಸಂದಣಿ ಇರುವಲ್ಲಿ ಹೋಗಬಾರದು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೆಮ್ಮು, ನೆಗಡಿ, ಜ್ವರವನ್ನು ನಿರ್ಲಕ್ಷಿಸದೆ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ. ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೊಳಗಾಗಿ ವೈದ್ಯರ ಸಲಹೆ ಸೂಚನೆ ಪಾಲಿಸಬೇಕು. ಕೋವಿಡ್ ಕುರಿತಂತೆ ಆರೋಗ್ಯ ಇಲಾಖೆ ಯಿಂದ ಬರುವ ಅಧಿಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳುಸುದ್ಧಿಗಳಿಗೆ ಕಿಡಿಗೊಡಬೇಡಿ. ಪ್ರತಿ ಗ್ರಾಪಂ ಮಟ್ಟದಲ್ಲೂ ಜೆಎನ್1 ನಿಯಂತ್ರಣ ಮತ್ತು ಮುಂಜಾಗ್ರತಾ ಸಭೆ ನಡೆಸಿ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ, ಆಕ್ಸಿಜನ್ ಮುಂತಾದ ಸೌಲಭ್ಯಗಳನ್ನು ಸರಿಪಡಿಸಿಟ್ಟುಕೊಳ್ಳಬೇಕು. ಕಳೆದ ಬಾರಿ ಕೇವಲ 10 ರಿಂದ 12ರವರೆಗೆ ಆಕ್ಸಿಜನ್ ಸಿಲಿಂಡರ್ ಲಭ್ಯವಿದ್ದ ಜಾಗದಲ್ಲಿ ಇಂದು 15 ಕ್ಕೂ ಹೆಚ್ಚು ಸಿಲಿಂಡರ್‌ಗಳಿವೆ, ಕೋವಿಡ್ ವಾರ್ಡ್ಗಳಿವೆ. ಚಿಕಿತ್ಸೆಗೆ ಯಾವುದೇ ಸೌಲಭ್ಯಗಳ ಕೊರತೆ ಕಂಡುಬಂದಲ್ಲಿ ಆಸ್ಪತ್ರೆ ಕಮಿಟಿ ಸಭೆ ಕರೆದು ಆಸ್ಪತ್ರೆ ರಕ್ಷಾ ಸಮಿತಿಗೆ ತಿಳಿಸಿದ್ದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶುಶ್ರೂಷಕಿಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಇಲಾಖಾ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಶಾಸಕರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಾಸಕರು ಕೋವಿಡ್ ಸಮಯದಲ್ಲಿ ಅನೇಕ ಶುಶ್ರೂಷಕಿಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಅವರೆಲ್ಲರ ವಿಳಾಸ, ದೂರವಾಣಿಗಳನ್ನು ಸಿದ್ಧಪಡಿಸಿಕೊಂಡು ಅವರಿಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಸೇವೆಗೆ ಹಾಜರಾಗಲು ಸಿದ್ಧರಾಗಿರುವಂತೆ ತಿಳಿಸಿ. ಡಿಸಿ ಹಾಗೂ ಡಿಎಚ್‌ಒ ಮುಖೇನ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದರು.

ಕೊಪ್ಪ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿಗಳು ಬರುತ್ತಿದ್ದು ಒಬ್ಬ ರೋಗಿ ಜೊತೆ ಏಳೆಂಟು ಜನ ಬರುತ್ತಿರುತ್ತಾರೆ. ರಾತ್ರಿ ಮಹಿಳಾ ಶುಶ್ರೂಷಕಿಯರಿರುವುದರಿಂದ ಭದ್ರತೆ ಒದಗಿಸಬೇಕು ಎನ್ನುವ ಮನವಿಗೆ ಸ್ಪಂದಿಸಿದ ಶಾಸಕರು ಬೀಟ್ ಪೊಲೀಸರು ಹೆಚ್ಚಾಗಿ ಆಸ್ಪತ್ರೆ ಸಮೀಪವೇ ಓಡಾಡುವಂತೆ ಕ್ರಮ ಕೈಗೊಳ್ಳುವಂತೆ ಸಿಪಿಐ ಮಂಜುರವರಿಗೆ ತಿಳಿಸಿದರು.

ವೈದ್ಯಾಧಿಕಾರಿ ಸಂದೀಪ್, ತಹಸೀಲ್ದಾರ್ ಗೌರಮ್ಮ, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ ಸೇರಿದಂತೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ವಿವಿಧ ಇಲಾಖಾಧಿಕಾರಿಗಳು ಇದ್ದರು.