ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸಿ

| Published : Feb 22 2025, 12:45 AM IST

ಸಾರಾಂಶ

ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿಮಾರ್ಣ ಮಾಡುವುದು ಎಲ್ಲ ಪೋಷಕರ ಕರ್ತವ್ಯವಾಗಿದೆ

ಕುರುಗೋಡು: ಮಕ್ಕಳಿಗಾಗಿ ಆಸ್ತಿ ಮಾಡದೇ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ಅವರು ಸಮೀಪದ ಕಲ್ಲುಕಂಭ ಗ್ರಾಮದ ಮೇಘನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಳ್ಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದು, ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿಮಾರ್ಣ ಮಾಡುವುದು ಎಲ್ಲ ಪೋಷಕರ ಕರ್ತವ್ಯವಾಗಿದೆ. ಮಕ್ಕಳು ಸಹವಾಸ ದೋಷದಿಂದ ದಾರಿ ತಪ್ಪುವ ಅವಕಾಶಗಳಿರುತ್ತದೆ. ಶಾಲೆಯ ಅವಧಿಯ ನಂತರ ವಿದ್ಯಾರ್ಥಿಯ ಚಲನವಲನ ಬಗ್ಗೆ ಪೋಷಕರು ಸದಾ ನಿಗಾ ವಹಿಸಬೇಕು ಎಂದರು.

ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮುಂದಿನ ಶೈಕ್ಷಣಿಕ ದಾರಿ ಸುಲಭವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಜೀವಿಸುತ್ತಿರುವ ನಾವು ಎಲ್ಲ ವಿಷಯ ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ಇದೇ ವೇಳೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕ್ಯಾದಿಗೆಹಾಳು ಗಂಗಾಧರ ತಾತ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ರೇವತಿ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಸಿದ್ದಪ್ಪ, ಮಲ್ಲಿಕಾರ್ಜುನ ಕೊಟಗಿ, ನೀಲಪ್ಪ ಮುಕ್ಕಣ್ಣನವರ್, ಜೆ.ರವಿ, ಕೆಂ.ಎ. ಪಂಚಾಕ್ಷರಯ್ಯ, ಕೆ. ಶಂಕರ್, ಶಿವಮೂರ್ತಿ, ಪರಶುರಾಮ, ಉಮಾಕಾಂತಯ್ಯ, ಶಂಭುಲಿಂಗಯ್ಯ, ರೇಣುಕಾ ಜೋಗತಿ ಇದ್ದರು.