ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ: ರಾಜಶ್ರೀ ಜುಗತಿ

| Published : Feb 08 2024, 01:32 AM IST

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ: ರಾಜಶ್ರೀ ಜುಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತಿ ಕಾಲೋನಿಯ ಬಸವೇಶ್ವರ ಭವನದಲ್ಲಿ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ನವರಸ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಸ್ಕಾರಯುತವಾದ ಜೀವನವೇ ಶ್ರೇಷ್ಠ ಜೀವನ. ಹಾಗಾಗಿ ನಾವು ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.

ನಗರದ ಸಂಸ್ಕೃತಿ ಕಾಲೋನಿಯ ಬಸವೇಶ್ವರ ಭವನದಲ್ಲಿ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ನವರಸ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡಬೇಕು ಎನ್ನುವ ಪಾಲಕರು ಮೊದಲು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಉತ್ತಮ ಶಿಕ್ಷಣ, ಸಂಸ್ಕಾರ, ಆಚಾರ-ವಿಚಾರಗಳನ್ನು ಮಕ್ಕಳು ರೂಢಿಸಿಕೊಳ್ಳುವಂತೆ ಮಾಡಿ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಸಿಂದಗಿ ಪಟ್ಟಣದ ಆಕ್ಸಫರ್ಡ್‌ ಶಾಲೆಯ ಅಧ್ಯಕ್ಷ ಪ್ರಕಾಶ ಚೌಧರಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಇಟ್ಟುಕೊಳ್ಳಬೇಕು. ಆ ಗುರಿ ಸಾಧನೆಗಾಗಿ ಸತತ ಅಧ್ಯಯನ ಮಾಡಬೇಕು. ಓದು ನಿಮ್ಮ ಬಾಳನ್ನು ಬೆಳಗುತ್ತದೆ. ಹಾಗಾಗಿ ಶಿಕ್ಷಣವನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕು. ಆಗ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಚೇತನಾ ಶಿಕ್ಷಣ ಸಂಸ್ಥೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎ.ಎಚ್.ಕೊಳಮಲಿ ಮಾತನಾಡಿ, ಏಕಾಗ್ರತೆಯಿಂದ ಅಧ್ಯಯನ ಮಾಡಿದಾಗ ಗುರಿ ತಲುಪಲು ಸಾಧ್ಯ. ಹೈಸ್ಕೂಲ್ ಜೀವನ ವಿದ್ಯಾರ್ಥಿಗಳಿಗೆ ಪ್ರಮುಖ ಘಟ್ಟ ವಿದ್ಯಾರ್ಥಿಗಳು ಕಾಲಹರಣ ಮಾಡದೆ ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡಬೇಕು. ಮಕ್ಕಳ ಭವಿಷ್ಯತ್ತಿನಲ್ಲಿ ಶಿಕ್ಷಕ, ತಂದೆ, ತಾಯಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ದಿ.ಡಾ.ದಯಾನಂದ ಜುಗತಿ ಅವರ ಸ್ಮರಣಾರ್ಥ ನಗದು ಬಹುಮಾನವನ್ನು ನೀಡಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ.ನಾಗರಾಜ ಹೇರಲಗಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ಪ್ರಾಥಮಿಕ ವಿಭಾಗದ ಸಂಯೋಜಕಿ ಹೇಮಾ ಪಾಟನೆ ಇದ್ದರು.