ಸಾರಾಂಶ
ಕುಷ್ಟಗಿ: ಕಾಲ ಬದಲಾದಂತೆ ನಾವು ಬದಲಾಗಬೇಕು. ಯಾದವ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರುತಾಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ ಶ್ರೀಕೃಷ್ಣ ಯಾದವ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಹಾಗೂ ವಿವಿಧೋದ್ದೇಶ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ದೇವಸ್ಥಾನದ ಲೋಕಾರ್ಪಣೆ, ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾದವ ಸಮಾಜದವರು ಸೌಮ್ಯ ಸ್ವಭಾವದವರು ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ ಐದು ಲಕ್ಷ ರು. ಅನುದಾನ ನೀಡಲಾಗುವುದು. ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಕುಷ್ಟಗಿಯಲ್ಲಿ ಜಾಗ ಖರೀದಿ ಮಾಡಿ, ಸಮುದಾಯ ಭವನದ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ. ಒಟ್ಟಿನಲ್ಲಿ ಸಮಾಜ ಸಂಘಟಿತರಾಗಿ ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಗೊಳಿಸಬೇಕು ಎಂದರು.ಸಮಾಜದ ಯುವ ಮುಖಂಡ ಉಮೇಶ ಯಾದವ್ ಮಾತನಾಡಿ, ನಮ್ಮ ಸಮಾಜದ ತಾಲೂಕಿನ ಸುಮಾರು 50 ಹಳ್ಳಿಗಳಲ್ಲಿ ಮಾತ್ರ ಇದ್ದು, ಜನಸಂಖ್ಯೆ ಕಡಿಮೆ ಇದೆ. ನಾವು ಇನ್ನೂ ದನ ಕಾಯುವ ಕಾಯಕವನ್ನೆ ಮಾಡುತ್ತಿದ್ದು, ಆಧುನಿಕತೆಯ ಪರಿಣಾಮವಾಗಿ ನಾವು ಸಹಿತ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾಗಿರುವುದು ಅನಿವಾರ್ಯವಾಗಿದೆ. ನಮ್ಮ ಕಾಯಕ ಮಾಡುವ ಜತೆಗೆ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಉನ್ನತ ಹುದ್ದೆಗಳನ್ನು ಕೊಡಿಸುವ ಕೆಲಸವಾಗಬೇಕು. ವ್ಯಾಪಾರ-ವಹಿವಾಟು ಮಾಡುವ ಮೂಲಕ ಸಮಾಜದಲ್ಲಿ ಬದುಕಿ ಬಾಳುವಂತಾಗಬೇಕು. ನಮ್ಮನ್ನು ನಾವು ಗುರುತಿಸಿಕೊಳ್ಳುವಂತಹ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಯಾದವ ಸಮುದಾಯದ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ ಮುನಿರಾಜು ಅವರು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ದೂರವಾಣಿ ಕರೆ ಮಾಡಿ ಶುಭ ಕೋರಿದರು.ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಕೃಷ್ಣ ಯಾದವಾನಂದ ಮಹಾಸ್ವಾಮಿಗಳು, ಬಸವಲಿಂಗೇಶ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಮಾಲತಿ ನಾಯಕ, ಕೆ. ಮಹೇಶ, ಶೇಖರಯ್ಯ ಕಳಕಯ್ಯ ಶಾಂತಲಿಂಗಯ್ಯ, ಶಿವಪ್ಪ ಮಿರ್ಜಿ, ದುರಗಪ್ಪ ಬಣ್ಣದವರ, ರಾಮಣ್ಣ, ಯಮನೂರಪ್ಪ ಹಾಗೂ ತಾಲೂಕಿನ ಅನೇಕ ಸಮಾಜದ ಮುಖಂಡರು ಯುವಕರು ಇದ್ದರು.