ಸಾರಾಂಶ
ಸಂಜೀವಿನಿ ಸಂಘದ ಮಹಿಳೆಯರಿಂದ ಶ್ರಮದಾನ, ಪ್ರತಿಜ್ಞಾ ವಿಧಿ ಸ್ವೀಕಾರ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಓಜನಹಳ್ಳಿ ಗ್ರಾಮ ಪಂಚಾಯಿತಿಯ ಓಜನಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಸಂಜೀವಿನಿ ಸಂಘದ ಮಹಿಳೆಯರಿಂದ ಶ್ರಮದಾನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಜರುಗಿತು.ಜಿಲ್ಲಾ ಎಸ್‌ಬಿಎಂ ಸಮಾಲೋಚಕಿ ಬಸಮ್ಮ ಹುಡೇದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಂದು ಕುಟುಂಬದ ಸದಸ್ಯರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ವಾರಕ್ಕೆ ಕನಿಷ್ಠ 2 ಗಂಟೆಯಾದರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸ್ವಚ್ಛತೆ ಎನ್ನುವ ಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂದರು.
ಪ್ರತಿ ದಿನ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಸ್ವಚ್ಛ ವಾಹಿನಿಗೆ ನೀಡಬೇಕು. ವಸ್ತುಗಳನ್ನು ಖರೀದಿಸಲು ಹೋಗುವಾಗ ಮನೆಯಿಂದಲೇ ಬಟ್ಟೆ ಚೀಲ ತೆಗೆದುಕೊಂಡು ಹೋದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬೀಳಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ, ಅಂಗನವಾಡಿ, ದೇವಸ್ಥಾನ, ಮಸೀದಿ, ಮಂದಿರಗಳು, ಕಲ್ಯಾಣಿ, ಬಾವಿ, ಗೊಕಟ್ಟೆ ನಾಲಾಗಳನ್ನು ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ನಿರಂತರವಾಗಿ ಭಾಗವಹಿಸಿ ಸ್ವಚ್ಛತೆಯೇ ಸೇವೆ ಎನ್ನುವ ಪದಕ್ಕೆ ಅರ್ಥ ಕಲ್ಪಿಸಬೇಕು ಎಂದರು.ಈ ಸಂದರ್ಭದಲ್ಲಿ ಎಸ್‌ಬಿಎಂ ಜಿಲ್ಲಾ ಐಇಸಿ ಸಂಯೋಜಕ ಮಾರುತಿ ನಾಯಕ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಓಜನಹಳ್ಳಿ ಗ್ರಾಪಂ ಅಧ್ಯಕ್ಷ ಹುಚ್ಚಪ್ಪ ಭೋವಿ, ಸದಸ್ಯರಾದ ದ್ಯಾಮನಗೌಡ ಮಾಲಿಪಾಟೀಲ್, ಹುಚ್ಚಪ್ಪ ಮೇಟಿ, ಅನ್ನಪೂರ್ಣ ಜಂತ್ಲಿ, ಶಶಿಕಲಾ ಈಶ್ವರ್ ಗೌಡ್ರು, ಒಕ್ಕೂಟದ ಅಧ್ಯಕ್ಷೆ ಪುಷ್ಪ ಪೊಲೀಸ್ ಪಾಟೀಲ್, ಗ್ರಾಪಂ ಕಾರ್ಯದರ್ಶಿ ಆದಯ್ಯಸ್ವಾಮಿ ಹೇರೂರು, ಗ್ರಾಮ ಕಾಯಕ ಮಿತ್ರ ಮೆಹಬೂಬಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಜೀವಿನಿ ಸಂಘದ ಮಹಿಳೆಯರು ಇದ್ದರು.ಖಾದಿ ಮಳಿಗೆಗೆ ಡಿಸಿ ಚಾಲನೆ:
ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ ಖಾದಿ ಪ್ರಿಯರಿಗಾಗಿ ಸೆ. 25ರಿಂದ ಅ. 4ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿ ತಾತ್ಕಾಲಿಕ ಖಾದಿ ಮಾರಾಟ ಮಳಿಗೆಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು.ಇದೇ ವೇಳೆ ಮಾಹಿತಿ ನೀಡಿದ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕೆ.ವೀರೇಶ, ಮಹಾತ್ಮಾ ಗಾಂಧೀಜಿಯವರ ಜಯಂತಿ ಹಿನ್ನೆಲೆಯಲ್ಲಿ ಖಾದಿ ಬಟ್ಟೆ ಖರೀದಿಸಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿನ ಖಾದಿ ಸಂಘ-ಸಂಸ್ಥೆಗಳಿಂದ ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಜಿಲ್ಲಾಡಳಿತ ಭವನದಲ್ಲಿ ತಾತ್ಕಾಲಿಕ ಮಳಿಗೆ ಆರಂಭಿಸಲಾಗಿದೆ. ಈ ಮಳಿಗೆಯಲ್ಲಿ ಖಾದಿ, ರೇಷ್ಮೆ ಬಟ್ಟೆಗಳು, ರೆಡಿಮೇಡ್ ಬಟ್ಟೆ, ಜಮಖಾನಾ, ಟವಲುಗಳು ಸೇರಿದಂತೆ ಗ್ರಾಮೋದ್ಯೋಗ ಉತ್ಪನ್ನಗಳಾದ ಅಗರಬತ್ತಿ, ಸಾಬೂನು, ಜೇನುತುಪ್ಪ ಇತ್ಯಾದಿಗಳು ಮಾರಾಟಕ್ಕಾಗಿ ಲಭ್ಯವಿಡಲಾಗಿದೆ ಎಂದರು.ಕರ್ನಾಟಕ ಸರ್ವೋದಯ ಸೇವಾ ಸಮಿತಿಯ ಕಾರ್ಯದರ್ಶಿ ವಿದ್ಯಾ ಪಾಟೀಲ, ತಾಂತ್ರಿಕ ಮೇಲ್ವಿಚಾರಕ ವಿಶ್ವನಾಥ ವೈ., ಖಾದಿ ಕಾರ್ಯಕರ್ತ ಬಸವರಾಜ ಇನ್ನೀತರು ಇದ್ದರು.